ಚಾಮರಾಜನಗರ : ಲಾಕ್ಡೌನ್ ಅವಧಿಯಲ್ಲೂ ಶಾಲೆಯ ನಂಟನ್ನು ಬಿಡದೇ ಕರ್ತವ್ಯ ಪ್ರಜ್ಞೆ, ಪರಿಸರ ಕಾಳಜಿ ತೋರುತ್ತಿದ್ದ ಶಿಕ್ಷಕರನ್ನು ಇಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಗುಂಡ್ಲುಪೇಟೆ ತಾಲೂಕಿನ ಹೊಂಗಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಸಚಿವರು, ಶಾಲಾವರಣ, ಕೊಠಡಿಗಳು, ಶಾಲೆಯ ವ್ಯವಸ್ಥೆ ಕಂಡು"ಇದೊಂದು ಸಾರ್ಥಕ ಕ್ಷಣ, ದೈವಿಕ ಭಾವನೆ " ಮೂಡುತ್ತಿದೆ ಎಂದು ಶಿಕ್ಷಕ ಮಹಾದೇಶ್ವರಸ್ವಾಮಿ ಕಾರ್ಯಕ್ಕೆ ಸಂತಸ ಹೊರ ಹಾಕಿದರು.
ಶಾಲಾ ಕೊಠಡಿಗಳಿಗೆ ಡಾ. ಎಪಿಜೆ ಅಬ್ದುಲ್ ಕಲಾಂ, ಶ್ರೀನಿವಾಸ ರಾಮಾನುಜನ್, ಕುವೆಂಪು, ಷೇಕ್ಸ್‌ಪಿಯರ್ ಹೆಸರನ್ನಿಟ್ಟಿರುವುದು, ದಾನಿಗಳ ಸಹಾಯದಿಂದ ಬಿಸಿಯೂಟಕ್ಕಾಗಿ ತಟ್ಟೆ-ಲೋಟವನ್ನು ವ್ಯವಸ್ಥಿತವಾಗಿಟ್ಟಿರುವುದು, ಶಾಲಾವರಣದ ನೈರ್ಮಲ್ಯ, ಶೌಚಾಲಯದಲ್ಲಿ 24 ತಾಸು ಇರುವ ನೀರಿನ ವ್ಯವಸ್ಥೆ, ವಿದ್ಯಾರ್ಥಿಗಳಂತೆ ಶಿಕ್ಷಕರು, ಎಸ್ಡಿಎಂಸಿ ಸದಸ್ಯರಿಗೆ ಸಮವಸ್ತ್ರ, ಐಡಿ ಕಾರ್ಡ್ ಕೊಟ್ಟಿರುವುದನ್ನು ಕಂಡು ಚಕಿತರಾದರು.
ಶಾಲೆಯಲ್ಲಿ ಸದಾ ಹಸಿರು ಹೊದ್ದ ಮರಗಳಿರುವುದರಿಂದ ಹಕ್ಕಿಗಳ ಚಿಲಿಪಿಲಿ ಕೇಳಿ ಸ್ವತಃ ಸಚಿವರೇ ಹಕ್ಕಿಗಳಿಗೆ ಕಾಳು, ನೀರು ಹಾಕಿ ಸಂತಸಪಟ್ಟರು. ಇದರೊಟ್ಟಿಗೆ, ಶಾಲೆಯ ಭೇಟಿಯನ್ನು ಅವಿಸ್ಮರಣೀಯವಾಗಿಸಲು ಗಿಡವನ್ನು ನೆಟ್ಟಿದ್ದಾರೆ.
ಇದನ್ನೂ ಓದಿ:ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಜ್ಞರ ನೇಮಕ; ಜೂನ್ 30ರೊಳಗೆ ವರದಿ ಸಲ್ಲಿಕೆ
ಗಮನ ಸೆಳೆದಿದ್ದ ವರದಿ : ಲಾಕ್ಡೌನ್ ಅವಧಿಯಲ್ಲೂ ಪರಿಸರ ಕಾಳಜಿ ತೋರುತ್ತಿರುವ ಶಿಕ್ಷಕ ಮಹಾದೇವಸ್ವಾಮಿ ಕುರಿತು ಶುಕ್ರವಾರ ಈಟಿವಿ ಭಾರತ ವರದಿ ಬಿತ್ತರಿಸಿತ್ತು. ಸುದ್ದಿಯನ್ನು ಗಮನಿಸಿದ ಶಿಕ್ಷಣ ಸಚಿವರು ಶನಿವಾರ ಶಾಲೆಗೆ ಭೇಟಿ ನೀಡುವುದಾಗಿ ಮಾಹಿತಿ ಹಂಚಿಕೊಂಡಿದ್ದರು. ಅದರಂತೆ, ಇಂದು ಶಾಲೆಗೆ ಭೇಟಿ ನೀಡಿ, ಶಿಕ್ಷಕ ಮಹದೇಶ್ವರಸ್ವಾಮಿ ಅವರನ್ನು ಸನ್ಮಾನಿಸಿ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.