ಚಾಮರಾಜನಗರ: ಲಾಕ್ಡೌನ್ ಆದೇಶ ಜಾರಿಯಾಗಿರುವುದರಿಂದ ಎಲ್ಲರೂ ಮನೆಯಲ್ಲಿಯೇ ಇರಿ ಹೊರಗೆ ಬರಬೇಡಿ ಎಂದು ಹೇಳಿದರೂ ಮಾತು ಕೇಳದ ಕೆಲವರು ರಸ್ತೆ ಮೇಲೆ ಅನಗತ್ಯವಾಗಿ ಓಡಾಡುತ್ತಿರುವುದು ಸರ್ಕಾರಕ್ಕೆ ತಲೆನೋವಾಗಿತ್ತು. ಈ ಹಿನ್ನೆಲೆ ಇಂತಹವರ ಮೇಲೆ ಹದ್ದಿನ ಕಣ್ಣಿಡಲು ಜಿಲ್ಲೆಯಲ್ಲಿ ಡ್ರೋಣ್ ವ್ಯವಸ್ಥೆ ಮಾಡಲಾಗಿತ್ತು.
ಇದೀಗ ನಗರದ ಕರಿನಂಜನಪುರದ ಬಡವಣೆಯಲ್ಲಿ ಕೆಲವು ಪುಂಡರು ಲಾಕ್ಡೌನ್ ನಿಯಮದ ನಡುವೆ ದಾರಿಯಲ್ಲಿ ಕಾಣಿಸಿಕೊಂಡಿದ್ದು,ಅಂತವರನ್ನು ಡ್ರೋಣ್ ಸೆರೆಹಿಡಿದಿದೆ. ಅಲ್ಲದೇ ಡ್ರೋಣ್ ಇವರ ಬೆನ್ನು ಬಿದ್ದಿದ್ದು, ಯುವಕರು ಕ್ಯಾಮೆರಾ ಕಂಡು ಅಡ್ಡಾದಿಡ್ಡಿಯಾಗಿ ಓಡಿರುವ ದೃಶ್ಯ ಸೆರೆಯಾಗಿದೆ.
ಬಡಾವಣೆಯ ಶಾಲೆ ಸಮೀಪ ಕೆಲ ಯುವಕರು ಹರಟೆ ಹೊಡೆಯುತ್ತಾ, ಮೊಬೈಲ್ನಲ್ಲಿ ಹಾಡು ಹಾಕಿಕೊಂಡು ಸಮಯ ದೂಡುತ್ತಿರುವುದನ್ನು ಗಮನಿಸಿದ ಆಶಾ ಕಾರ್ಯಕರ್ತೆಯರು, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಅನಗತ್ಯವಾಗಿ ಕೂರುವ ಬದಲು ಮನೆಗೆ ತೆರಳಿ ಎಂದು ಬುದ್ಧಿವಾದ ಹೇಳಿದ್ದರು. ಅವರ ಮಾತು ಕೇಳದೇ ಅಸಡ್ಡೆ ತೋರಿದರು ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ, ಪೊಲೀಸರು ಡ್ರೋಣ್ನಲ್ಲಿ ಕಾರ್ಯಾಚರಣೆ ನಡೆಸಿದಾಗ ಹತ್ತಾರು ಯುವಕರು ಎದ್ದು ಬಿದ್ದು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಎಲ್ಲ ದೃಶ್ಯಗಳು ಡ್ರೋಣ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಜಿಲ್ಲೆಯಲ್ಲಿ ಇಂತಹ ಕೃತ್ಯ ನಡೆಯಬಾರದೆಂಬ ಉದ್ದೇಶದಿಂದ ಕ್ಯಾಮೆರಾ ಮೂಲಕ ಜನರ ಓಡಾಟ ಸೆರೆಹಿಡಿಯಲು ಪೊಲೀಸ್ ಇಲಾಖೆ ಮುಂದಾಗಿದೆ.