ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಾಗಿ 25 ವರ್ಷ ಪೂರೈಸಿದ ಹಿನ್ನೆಲೆ ಜಿಲ್ಲಾಡಳಿತದಿಂದ, ವರನಟ ಡಾ.ರಾಜ್ಕುಮಾರ್ ಅವರ ಹೆಸರಲ್ಲಿ ರಂಗಮಂದಿರ ಲೋಕಾರ್ಪಣೆಗೊಳಿಸಿ ಗೌರವ ಸಮರ್ಪಣೆ ಮಾಡಲಾಯಿತು. ಕಳೆದ ಒಂದು ದಶಕದಿಂದ ಕುಂಟುತ್ತ ಸಾಗುತ್ತಿದ್ದ ರಂಗಮಂದಿರ ಕಾಮಗಾರಿಯನ್ನು ಚುರುಕುಗೊಳಿಸಿ ಇಂದು ಸಚಿವ ವಿ.ಸೋಮಣ್ಣ ಲೋಕಾರ್ಪಣೆಗೊಳಿಸಿದ್ದಾರೆ.
ದಶಕದ ಕಾಮಗಾರಿ: ಜನಪದೀಯವಾಗಿ ಹಾಗೂ ಸಾಂಸ್ಕೃತಿಕವಾಗಿ ಸಿರಿವಂತವಾಗಿರುವ ಜಿಲ್ಲೆಯಲ್ಲಿ ಒಂದು ಸುಸಜ್ಜಿತ ರಂಗಮಂದಿರ ಬೇಕು ಎನ್ನುವುದು ಹಲವು ಕಲಾವಿದರು ಹಾಗೂ ರಂಗಾಸಕ್ತರ ಕೂಗಾಗಿತ್ತು. ಕಲಾವಿದರ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರ 2009–10ನೇ ಸಾಲಿನಲ್ಲಿ ರಂಗಮಂದಿರ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಜಿಲ್ಲಾಡಳಿತ ಭವನದ ಸಮೀಪ ಒಂದು ಎಕರೆ 20 ಗುಂಟೆ ಪ್ರದೇಶದಲ್ಲಿ ₹3.5 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಆದರೇ ಒಳಾಂಗಣದ ಕೆಲಸ ಆಗಿರಲಿಲ್ಲ.
ಒಳಾಂಗಣದಲ್ಲಿ ಸ್ಥಳಾವಕಾಶ ಕಡಿಮೆ ಇದೆ ಹಾಗೂ ರಂಗಮಂದಿರದ ರೀತಿಯಲ್ಲಿ ನಿರ್ಮಿಸಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಮಹದೇವ ಪ್ರಸಾದ್ ಅವರು ಮತ್ತೆ ಕೆಲವು ಕಾಮಗಾರಿ ನಡೆಸಲು ಸೂಚಿಸಿದ್ದರು. ಆ ಬಳಿಕ, ಉಳಿದ ಕೆಲಸಗಳನ್ನು ಮಾಡಲು ಹೆಚ್ಚುವರಿ ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಸರ್ಕಾರ ₹2.50 ಕೋಟಿ ಬಿಡುಗಡೆಯನ್ನೂ ಮಾಡಿತ್ತು. ಆದರೆ ಕೆಲಸಗಳು ನಿಧಾನ ಗತಿಯಲ್ಲಿ ಸಾಗುತ್ತಿದ್ದವು. ದುಡ್ಡಿದ್ದರೂ, ಕೆಲಸ ಪೂರ್ಣವಾಗದಿರುವುದಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಕಲಾವಿದರು, ರಂಗಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದ್ದರು.
ವಿ.ಸೋಮಣ್ಣ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆಯೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕಾಮಗಾರಿ ಬೇಗ ಮುಗಿಸುವಂತೆ ತಾಕೀತು ಮಾಡಿದ್ದರು. ಜಿಲ್ಲೆಯಾಗಿ 25 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ರಂಗಮಂದಿರದ ಉದ್ಘಾಟನೆಯಾಗಬೇಕು ಎಂದು ಅವರು ಕಟ್ಟುನಿಟ್ಟಾಗಿ ಹೇಳಿದ್ದರು. ಸಚಿವರ ಆದೇಶದಂತೆ ಇಂದು ರಂಗಮಂದಿರ ಪೂರ್ಣಗೊಂಡಿದ್ದು, ರಂಗಮಂದಿರ ನಿರ್ಮಾಣಕ್ಕೆ ಒಟ್ಟು ₹7 ಕೋಟಿಯಷ್ಟು ವೆಚ್ಚತಗುಲಿದೆ. ಲಿಫ್ಟ್ ಅಳವಡಿಸುವ ಕಾರ್ಯ ಬಾಕಿ ಇದ್ದು, ಒಟ್ಟು 500 ಜನ ಕೂರಬಹುದಾದ ಆಸನ ವ್ಯವಸ್ಥೆಯನ್ನೂ ಮಾಡಲಾಗಿದೆ.
ಪುನೀತ್ ಭಾವಚಿತ್ರ ಕೊಡುಗೆ: ಇಂದು ನಡೆದ ಲೋಕಾರ್ಪಣೆ ಸಮಾರಂಭದಲ್ಲಿ ಗಣ್ಯರಿಗೆ ಪುನೀತ್ ಭಾವಚಿತ್ರವನ್ನು ಕೊಟ್ಟು ಸನ್ಮಾನಿಸಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: ಶಕ್ತಿಧಾಮ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಿವ ರಾಜಕುಮಾರ್ ದಂಪತಿ ಭಾಗಿ