ಚಾಮರಾಜನಗರ : ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ಸಮಾಜವನ್ನಷ್ಟೇ ರಕ್ಷಿಸುವುದಲ್ಲ, ಪರಿಸರವನ್ನೂ ಉಳಿಸುತ್ತೇವೆ ಎಂದು ಚಾಮರಾಜನಗರ ಜಿಲ್ಲಾ ಪೊಲೀಸರು ಮುಂದಡಿ ಇಟ್ಟಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್ ಡಿ ಆನಂದಕುಮಾರ್ ನೇತೃತ್ವದಲ್ಲಿ ಅರಣ್ಯ ಸಂಚಾರಿ ದಳದ ಪೊಲೀಸರು, ಠಾಣಾ ಸರಹದ್ದು, ಕ್ವಾಟರ್ಸ್, ಪೊಲೀಸ್ ಇಲಾಖೆಗೆ ಒಳಪಟ್ಟ ಜಾಗಗಳಲ್ಲಿ ಗಿಡಗಳನ್ನು ನೆಡಲು ಪಣ ತೊಟ್ಟಿದ್ದಾರೆ. ಜಿಲ್ಲೆಯ ಪೊಲೀಸ್ ಠಾಣೆಗಳ ಆವರಣದಲ್ಲಿ ಉತ್ತಮ ಪರಿಸರ ನಿರ್ಮಾಣ ಜೊತೆಗೆ ಸಾರ್ವಜನಿಕರಿಗೆ ಪರಿಸರ ಪ್ರಜ್ಞೆ ಮೂಡಿಸುವುದು ಇದರ ಉದ್ದೇಶವಾಗಿದೆಯಂತೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್ ಡಿ ಆನಂದಕುಮಾರ್ ಈಟಿವಿಯೊಂದಿಗೆ ಮಾತನಾಡಿ, ಈಗಾಗಲೇ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ನಮ್ಮ ಠಾಣೆಗಳು, ಕಚೇರಿಗಳು, ಡಿಎಆರ್ ಮೈದಾನ, ಪೊಲೀಸ್ ಸ್ಥಿರಾಸ್ಥಿಗಳ ಖಾಲಿ ಸ್ಥಳಗಳನ್ನು ಗುರುತಿಸಿ ಗಿಡ ನೆಟ್ಟು ಅದು ಮರವಾಗುವ ತನಕ ಇಲಾಖೆ ಪೋಷಿಸುತ್ತದೆ ಎಂದರು.
ಗಿಡ ಬೇಕಾದ್ರೆ ಫೋನ್ ಮಾಡಿ
ಕೊಳ್ಳೇಗಾಲ ಅರಣ್ಯ ಸಂಚಾರಿ ದಳ ಪಿಎಸ್‌ಐ ರವಿಶಂಕರ್ ದೂರವಾಣಿ ಮೂಲಕ ಪ್ರತಿಕ್ರಿಯಿಸಿ, ಈಗಾಗಲೇ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ತಹಶೀಲ್ದಾರ್ ಹಾಗೂ ಬಿಇಒ ಅವರು ಪರಿಸರ ಸಂರಕ್ಷಣೆ ಕೆಲಸಕ್ಕೆ ಸಾಥ್ ನೀಡಿದ್ದಾರೆ. ಅದಲ್ಲದೆ 10 ಸಾವಿರ ಗಿಡಗಳನ್ನು ನೆಟ್ಟು ಮರವಾಗಿಸುವ ಸಂಕಲ್ಪ ತೊಟ್ಟಿರುವ ಸಾಲುಮರದ ವೆಂಕಟೇಶ್ ಅವರಿಗೂ ಸಂಪೂರ್ಣ ಸಹಕಾರ ನೀಡಲಿದ್ದೇವೆ ಎಂದರು.
ಅರಣ್ಯ ಸಂಚಾರಿ ದಳದ ಆಸಕ್ತರಿಗೆ ಗಿಡವನ್ನು ನೀಡುತ್ತಿದ್ದು, ಸಸ್ಯಗಳನ್ನು ಕಾಪಾಡಿಕೊಳ್ಳುವ ಬದ್ಧತೆ ಇರುವವರು, ಚಾಮರಾಜನಗರ ಜಿಲ್ಲೆಯ ಪರಿಸರ ಪ್ರೇಮಿಗಳಾದ ರವಿಶಂಕರ್- 99727 97158 ಹಾಗೂ ಗುರುಸ್ವಾಮಿ- 97433 67030 ಅವರನ್ನು ಸಂಪರ್ಕಿಸಿ ಗಿಡಗಳನ್ನು ಪಡೆಯಬಹುದಾಗಿದೆ.