ಚಾಮರಾಜನಗರ: ಚೆಲುವ ಚಾಮರಾಜನಗರ ರಾಯಭಾರಿಯಾಗಿದ್ದ ಪುನೀತ್ ರಾಜ್‍ಕುಮಾರ್ ಅವರ ನೇತ್ರದಾನದ ಆದರ್ಶವನ್ನು ಇನ್ನಷ್ಟು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಚಾಮರಾಜನಗರ ಜಿಲ್ಲಾಡಳಿತ 46 ಸಾವಿರ ಮಂದಿಯಿಂದ ನೇತ್ರದಾನ ನೋಂದಣಿ ಮಾಡಿಸುವ ಅಭಿಯಾನಕ್ಕೆ ಮುಂದಾಗಿದೆ.
ಚಾಮರಾಜನಗರ ಜಿಲ್ಲೆಯ ಪ್ರಮಾಸೋದ್ಯಮ ರಾಯಭಾರಿಯಾಗಿದ್ದ ನಟ ಪುನೀತ್ ರಾಜ್‍ಕುಮಾರ್ ಅವರ ಮಾನವೀಯ ಸೇವಾ ಕಾರ್ಯಗಳು ಸದಾ ಸ್ಮರಣೀಯವಾದದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಪುನೀತ್ ರಾಜ್ ಕುಮಾರ್ ಅವರ ನೇತ್ರದಾನದ ಆದರ್ಶವನ್ನಿಟ್ಟುಕೊಂಡು ನವೆಂಬರ್ ಅಂತ್ಯದೊಳಗೆ 10 ಸಾವಿರ ಜನರನ್ನು ನೇತ್ರದಾನಕ್ಕಾಗಿ ನೋಂದಾಯಿಸುವ ಕಾರ್ಯದ ಗುರಿಯನ್ನು ಹೊಂದಿದೆ. ಪುನೀತ್ ರಾಜ್‍ಕುಮಾರ್ ಅವರು 46ನೇ ವಯಸ್ಸಿನಲ್ಲಿ ನಿಧನ ಹೊಂದಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ 46 ಸಾವಿರ ಜನರನ್ನು ನೇತ್ರದಾನಕ್ಕಾಗಿ ನೋಂದಾಯಿಸುವ ಮಹತ್ತರ ಉದ್ದೇಶ ಹೊಂದಲಾಗಿದೆ ಎಂದು ಡಿಸಿ ಡಾ.ಎಂ.ಆರ್.ರವಿ ತಿಳಿಸಿದ್ದಾರೆ.
ಪುನೀತ್ ರಾಜ್‍ಕುಮಾರ್ ಅವರನ್ನು ಅದರ್ಶವಾಗಿಟ್ಟುಕೊಂಡು ನೇತ್ರದಾನ ಮಾಡುವಂತೆ ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳನ್ನು ಉತ್ತೇಜಿಸುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿಯೇ ರೆಡ್‍ಕ್ರಾಸ್ ಹಾಗೂ ಜಿಲ್ಲಾಸ್ಪತ್ರೆ ಸಹಯೋಗದಲ್ಲಿ ಎಲ್ಲೆಡೆ ನೇತ್ರದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಶಿಬಿರಗಳ ಯಶಸ್ಸಿಗೆ ಜಿಲ್ಲೆಯ ಸ್ವಯಂ ಸೇವಾ ಸಂಸ್ಥೆಗಳು, ನೆಹರು ಯುವ ಕೇಂದ್ರ ಇನ್ನಿತರ ಸಂಘ ಸಂಸ್ಥೆಗಳ ಸಹಕಾರವನ್ನು ಪಡೆಯಲಿದೆ.
ಜಿಲ್ಲೆಯಲ್ಲಿ ನಿರ್ಮಿಸಲಾಗುವ ಕಣ್ಣಿನ ಅಸ್ಪತ್ರೆಗೆ ಪುನೀತ್ ರಾಜ್‍ಕುಮಾರ್ ಅವರ ಗೌರವಾರ್ಥ ಅವರ ಹೆಸರನ್ನೆ ಇಡುವ ಮೂಲಕ ಜಿಲ್ಲೆಯಿಂದ ಗೌರವ ಸಲ್ಲಿಸುವ ಮಹತ್ವದ ತೀರ್ಮಾನವನ್ನು ಜಿಲ್ಲಾಡಳಿತ ಕೈಗೊಂಡಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರ ಅಧ್ಯಕ್ಷತೆಯಲ್ಲಿ ನೇತ್ರದಾನ ಅಭಿಯಾನ ಕುರಿತು ಆರೋಗ್ಯ ಇಲಾಖೆ, ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆದಿದ್ದು, ಸಭೆಯ ಆರಂಭದಲ್ಲೇ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಮಾತನಾಡಿ, ಚಾಮರಾಜನಗರ ಜಿಲ್ಲೆಯ ಪ್ರವಾಸೋದ್ಯಮ ರಾಯಭಾರಿಯಾಗಿದ್ದ ಹಾಗೂ ತವರೂರಿನ ನಟ ಆಗಿದ್ದ ದಿವಂಗತ ಪುನೀತ್ ರಾಜ್‍ಕುಮಾರ್ ಅವರಿಗೆ ಜಿಲ್ಲೆಯ ವತಿಯಿಂದ ಗೌರವಪೂರ್ವಕ ಸ್ಮರಣೀಯ ಕಾರ್ಯವನ್ನು ಹಮ್ಮಿಕೊಳ್ಳಬೇಕಿದೆ. ಯಾವುದೇ ವ್ಯಕ್ತಿ ಮರಣ ಹೊಂದಿದ ನಂತರ ಕಣ್ಣುಗಳು ಮಣ್ಣಾಗಬಾರದು. ಆ ಕಣ್ಣುಗಳು ಜೀವಂತವಿದ್ದು ಇತರೆ ಅಂಧರಿಗೆ ದಾರಿದೀಪವಾಗಬೇಕು. ಪುನೀತ್ ರಾಜ್‍ಕುಮಾರ್ ಅವರ ನೇತ್ರದಾನ ಆದರ್ಶ ಎಲ್ಲರಲ್ಲಿಯೂ ಬರಬೇಕು. ಇದಕ್ಕಾಗಿ ಜಿಲ್ಲೆಯಾದ್ಯಂತ ನೇತ್ರದಾನ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡು ಜನರನ್ನು ಜಾಗೃತಗೊಳಿಸಬೇಕಾಗಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ಸಾರ್ವಜನಿಕವಾಗಿ ನೇತ್ರದಾನ ಅಭಿಯಾನ ಹಮ್ಮಿಕೊಳ್ಳುವ ಉದ್ದೇಶದಿಂದ ಎಲ್ಲಾ ತಾಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಸಮಿತಿ ರಚಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
3500 ಸಾವಿರ ಮಂದಿ ಅಂಧರು:
ವಿಕಲಚೇತನರ ಇಲಾಖೆಯ ವರದಿಯನ್ವಯ ಜಿಲ್ಲೆಯಲ್ಲಿ 3500 ಅಂಧರಿದ್ದಾರೆ. ಜಿಲ್ಲೆಯಲ್ಲಿ ಎಷ್ಟು ಮಂದಿ ಅಂಧರಿದ್ದಾರೆ ಎಂಬುದನ್ನು ಸರ್ವೇ ಕಾರ್ಯ ಆರಂಭಿಸುವ ಅಗತ್ಯವಿದೆ. ಇದಕ್ಕಾಗಿ ವ್ಯವಸ್ಥಿತವಾದ ಗುರಿ ನಿಗದಿಪಡಿಸಿಕೊಳ್ಳಬೇಕು. ಜಿಲ್ಲಾಡಳಿತ ಭವನದಲ್ಲಿಯೂ ಸಹ ಒಂದು ದಿನದ ಶಿಬಿರವನ್ನು ಆಯೋಜಿಸಲಾಗುವುದು. ನೇತ್ರದಾನ ಶಿಬಿರದಲ್ಲಿ ದೃಷ್ಠಿದಾನಕ್ಕಾಗಿ ನೊಂದಾಯಿತರಾದವರಿಗೆ ನೀಡಲು ಅರ್ಜಿ ನಮೂನೆ, ಪ್ರಮಾಣಪತ್ರ ಹಾಗೂ ಗುರುತಿನ ಚೀಟಿಯನ್ನು ಸಿದ್ದಪಡಿಕೊಳ್ಳುವಂತೆ ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿಯವರು ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ಕಣ್ಣಿನ ಆಸ್ಪತ್ರೆಯ ಅವಶ್ಯವಿದ್ದು, ಈಗಾಗಲೇ ಜಾಗ ಗುರುತಿಸಿ, ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ. ಜಾಗ ಲಭ್ಯವಿಲ್ಲದಿದ್ದರೆ ಸರ್ಕಾರದಿಂದಲೇ ಸ್ಥಳ ನೀಡಲಾಗುವುದು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ನಿರ್ಮಾಣ ಮಾಡಲಿರುವ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ನಿಧಿ ಕೇಂದ್ರವನ್ನು ಸ್ಥಾಪಿಸಲಾಗುವುದು ಜಿಲ್ಲೆಯಲ್ಲಿ ನಿರ್ಮಾಣ ಮಾಡುವ ಕಣ್ಣಿನ ಆಸ್ಪತ್ರೆಗೆ ಪುನೀತ್ ರಾಜ್‍ಕುಮಾರ್ ಅವರ ಹೆಸರನ್ನೇ ಇಡುವ ಮೂಲಕ ಜಿಲ್ಲಾಡಳಿತ ಗೌರವ ಸಲ್ಲಿಸಲಿದೆ ಎಂದು ಡಿಸಿ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ:ಕೊಳ್ಳೇಗಾಲ: ಪುನೀತ್ ರಾಜ್‍ಕುಮಾರ್ ರಸ್ತೆ ನಾಮಫಲಕ ಅನಾವರಣ