ಚಾಮರಾಜನಗರ: ಕೊರೊನಾ ಸಂಕಷ್ಟದ ಜೊತೆ ಜೊತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವೇಗ ನೀಡಲು ಜಿಲ್ಲಾಡಳಿತ ಹತ್ತು, ಹಲವು ಯೋಜನೆಗಳನ್ನು ಹಮ್ಮಿಕೊಂಡಿರುವ ಕುರಿತು ಡಿಸಿ ಡಾ.ಎಂ.ಆರ್.ರವಿ ಫೇಸ್‌ಬುಕ್ ಲೈವ್ ಮೂಲಕ ಮಾಹಿತಿ ನೀಡಿದ್ದಾರೆ.
ರೇಷ್ಮೆ ಸೀರೆಯನ್ನು ಬ್ರಾಂಡ್ ಮಾಡುವುದು, ನಿರುದ್ಯೋಗಿ ಯುವಕರಿಗೆ ಕೌಶಲ್ಯ ತರಬೇತಿ, ಪ್ರವಾಸಿತಾಣಗಳನ್ನು ಪ್ರಮೋಟ್ ಮಾಡುವುದು, ಅನಕ್ಷರಸ್ಥರಿಗೆ ಶಿಕ್ಷಣ ನೀಡುವುದು, ಶತಮಾನ ಕಂಡ ಶಾಲೆಗಳ ಅಭಿವೃದ್ಧಿ, ತಾಲೂಕಿಗೊಂದು ಮಾದರಿ ಸ್ಮಶಾನ ನಿರ್ಮಿಸುವ ಯೋಜನೆಯನ್ನು ಜಿಲ್ಲಾಡಳಿತ ಹಾಕಿಕೊಂಡಿದೆ ಎಂದು ಅವರು ತಿಳಿಸಿದರು.
ರೇಷ್ಮೆ ಬ್ರಾಂಡ್ :
ಒಂದು ಕಾಲದಲ್ಲಿ ರೇಷ್ಮೆಗೆ ಸುಪ್ರಸಿದ್ಧವಾಗಿದ್ದ ಜಿಲ್ಲೆಯನ್ನು ಮತ್ತೇ ಗತವೈಭವಕ್ಕೆ ಕೊಂಡೊಯ್ಯಲು ಕೊಳ್ಳೇಗಾಲ ರೇಷ್ಮೆ ಸೀರೆಯನ್ನು ಬ್ರಾಂಡ್ ಮಾಡಲು ಮುಂದಾಗಿದ್ದು, ಇದಕ್ಕಾಗಿ 9 ನೇಕಾರರ ಸಂಘವನ್ನು ಒಗ್ಗೂಡಿಸಿ ಪುನಶ್ಚೇತನಗೊಳಿಸಿ ಕೊಳ್ಳೇಗಾಲದಲ್ಲಿ ಸೀರೆ ಮಾರಾಟ ಮಳಿಗೆ ತೆರೆಯಲಾಗುವುದು. ರೇಷ್ಮೆ ನೆಚ್ಚಿಕೊಂಡಿರುವ 779 ಕುಟುಂಬಗಳ ಜೀವನ ಸುಧಾರಿಸುವ ಜೊತೆಗೆ ಸಿಲ್ಕ್ ಬ್ರಾಂಡ್ ಮಾಡಲಾಗುವುದು.
ಅಕ್ಷರೋತ್ಸವ:
ಜಿಲ್ಲೆಯ ಶಿಕ್ಷಣವಂತರ ಸಂಖ್ಯೆ ಶೇ.63 ಇದ್ದು, ಉಳಿದ ಶೇ. 37 ರಷ್ಟು ಅನಕ್ಷರಸ್ಥರನ್ನು ಮುಖ್ಯ ವಾಹಿನಿಗೆ ಕರೆತರಲು ಅಕ್ಷರೋತ್ಸಹ ಯೋಜನೆ ರೂಪಿಸಲಾಗಿದೆ. ಕಾಡಂಚಿನ, ಗ್ರಾಮೀಣ ಪ್ರದೇಶದ ಅಶಿಕ್ಷಿತರಿಗೆ ವಿದ್ಯೆ ಕಳುಹಿಸುವ ಮಹತ್ತರ ಯೋಜನೆ ಇದಾಗಿದೆ.
ಯುವಕರಿಗೆ ತರಬೇತಿ:
ನಿರುದ್ಯೋಗ ಯುವಕ - ಯುವತಿಯರಿಗೆ ಕೌಶಲ್ಯದ ತರಬೇತಿ ನೀಡಿ ಉದ್ಯೋಗ ಕಂಡುಕೊಳ್ಳಲು ನೆರವಾಗಲಿದ್ದು, ಮುಖ್ಯವಾಗಿ ಗ್ರಾನೈಟ್ ಕಟಿಂಗ್- ಪಾಲಿಶಿಂಗ್ ತರಬೇತಿ, ಜೆಸಿಬಿ ಆಪರೇಟಿಂಗ್, ಬಾಳೆ ಚಿಪ್ಸ್, ಟೊಮೇಟೊ ಸಾಸ್- ಕೆಚಪ್, ಪಾಪ್ ಕಾರ್ನ್ ತರಬೇತಿಯನ್ನು ಹೇಳಿಕೊಡಲಿದ್ದು, ಸರ್ಕಾರ 83 ಲಕ್ಷ ರೂ. ಅನುದಾನ ನೀಡುವ ಭರವಸೆ ನೀಡಿದೆ.
ಪ್ರವಾಸೋದ್ಯಮಕ್ಕೆ ಉತ್ತೇಜನ:
ಜಿಲ್ಲೆಯ ಅತ್ಯಮೂಲ್ಯ ಆಸ್ತಿಯಾದ ಪ್ರವಾಸಿತಾಣಗಳನ್ನು ಪ್ರಮೋಟ್ ಮಾಡಲು 4 -5 ನಿಮಿಷದ ವಿಡಿಯೋ ಚಿತ್ರೀಕರಿಸಿ, ಚಿತ್ರನಟ ಪುನೀತ್ ರಾಜ್ ಕುಮಾರ್ ಅವರು ಪ್ರವಾಸಿ ತಾಣಗಳ ಕುರಿತು ಸಂದೇಶ ನೀಡಲಿದ್ದಾರೆ.
ಶತಮಾನ ಕಂಡ ಶಾಲೆ ಅಭಿವೃದ್ಧಿ:
ಶತಮಾನ ಕಂಡ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಮಾಡಲು ಜಿಲ್ಲಾಡಳಿತ ಮುಂದಾಗಿದ್ದು, ಶತಮಾನ ಕಂಡ ಮುಜರಾಯಿ ವ್ಯಾಪ್ತಿಯ 185 ದೇಗುಲಗಳ ಅಭಿವೃದ್ಧಿ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ.
ಮಾದರಿ ಸ್ಮಶಾನ:
ತಾಲೂಕಿಗೊಂದರಂತೆ ಆರಂಭಿಕವಾಗಿ ಮಾದರಿ ಸ್ಮಶಾನವನ್ನು ಶಾಂತಿಧಾಮ ಹೆಸರಿನಲ್ಲಿ ರೂಪಿಸಲಾಗುವುದು. ಜೊತೆಗೆ ಆಲೆಮನೆಗಳ ಆಧುನೀಕರಣ, ಜಿಲ್ಲೆಯ ಸಮಗ್ರ ಇತಿಹಾಸವನ್ನು ದಾಖಲಿಸುವ ವಿನೂತನ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ ಮುಂದಾಗಿದೆ.