ಚಾಮರಾಜನಗರ: ಪ್ರಸಿದ್ಧ ಯಾತ್ರಾ ಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಸಂಭ್ರಮವೇನೋ ಜೋರಾಗಿದೆ. ಆದರೆ, ಬರುವ ಭಕ್ತಾದಿಗಳು ಚಪ್ಪಲಿ ಸಮಸ್ಯೆ ತಂದೊಡ್ಡಿದ್ದಾರೆ.
ಬೆಟ್ಟದ ತಪ್ಪಲು ತಾಳಬೆಟ್ಟದಿಂದ ಹತ್ತುವವರು ಚಪ್ಪಲಿಗಳನ್ನು ತಾಳಬೆಟ್ಟ ಮತ್ತು ಕಾಡುಹಾದಿಯಲ್ಲೇ ಬಿಟ್ಟು ತೆರಳುತ್ತಿದ್ದಾರೆ. ಬರಿಗಾಲಲ್ಲಿ ನಡೆಯುವ ಹರಕೆ ಹೊತ್ತವರು, ತಮ್ಮ ಕಷ್ಟ-ದರಿದ್ರ ಚಪ್ಪಲಿ ಮೂಲಕವೇ ಹೋಗಲಿ ಎಂದು ನಂಬಿಕೆಯಿಂದ ಲಕ್ಷಾಂತರ ಮಂದಿ ಚಪ್ಪಲಿಗಳನ್ನು ಕಳಚಿ ಬೆಟ್ಟ ಏರುತ್ತಿದ್ದಾರೆ. ಈಗಾಗಲೇ ಚಪ್ಪಲಿಗಳನ್ನು ಪ್ರಾಧಿಕಾರ ಅಲ್ಲಲ್ಲಿ ಗುಡ್ಡೆ ಹಾಕಿದೆ.
ಈ ಕುರಿತು ದೂರವಾಣಿ ಮೂಲಕ ಮಾತನಾಡಿದ ಪ್ರಾಧಿಕಾರದ ಕಾರ್ಯದರ್ಶಿ ಜೈವಿಭವಸ್ವಾಮಿ, ಮೂರು ಲಾರಿಗಳಷ್ಟು ಚಪ್ಪಲಿ ಸಂಗ್ರಹವಾಗಿದೆ. ಇಷ್ಟೊಂದು ಚಪ್ಪಲಿಗಳನ್ನು ನಾಶಪಡಿಸುವ ಬದಲು ಅವಶ್ಯಕತೆ ಇರುವವರಿಗೆ ನೀಡಲು ಚಿಂತನೆ ನಡೆಸಲಾಗಿದೆ ಎಂದರು.
ಉತ್ತಮವಾಗಿರುವ, ಬಳಕೆಗೆ ಯೋಗ್ಯವಾದ ಚಪ್ಪಲಿಗಳನ್ನು ಅವಶ್ಯಕತೆ ಇರುವವರಿಗೆ ವಿತರಿಸುವ ಸ್ವಯಂ ಸೇವಕ ಸಂಸ್ಥೆ ಮುಂದೆ ಬಂದರೆ ಅನೂಕೂಲವಾಗಲಿದೆ. ಆಸಕ್ತರು ನನ್ನನ್ನು ಸಂಪರ್ಕಿಸಬಹುದು (+91 9480512270) ಎಂದು ಮನವಿ ಮಾಡಿದ್ದಾರೆ.