ಚಾಮರಾಜನಗರ: ದಕ್ಷಿಣ ಭಾರತದ ಪ್ರಮುಖ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು ಬೆಳಗ್ಗೆ ಅದ್ಧೂರಿಯಯಾಗಿ ರಥೋತ್ಸವ ನಡೆಯಿತು. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದಲೂ ಹೊರಗಿನ ಭಕ್ತರಿಗೆ ಇದ್ದ ನಿರ್ಬಂಧ ಈ ಬಾರಿ ತೆರವಾದ ಹಿನ್ನೆಲೆಯಲ್ಲಿ, ಭಕ್ತ ಸಾಗರವೇ ಹರಿದು ಬಂದು ಮಹದೇಶ್ವರನಿಗೆ ಜೈಕಾರ ಹಾಕಿ ರಥ ಎಳೆದು ತಮ್ಮ ಇಷ್ಟಾರ್ಥ ನೆರವೇರಲೆಂದು ಪ್ರಾರ್ಥಿಸಿದರು.
ಇದನ್ನೂ ಓದಿ: 'ರಷ್ಯಾ-ಉಕ್ರೇನ್ ಯುದ್ಧ ನಿಲ್ಲಲಿ, ಭಾರತೀಯರು ಸುರಕ್ಷಿತವಾಗಿ ಬರಲಿ': ಬಾಳೆಹಣ್ಣಿನ ಮೇಲೆ ಬರೆದು ರಥಕ್ಕೆ ತೂರಿದ ಭಕ್ತರು
ಇಂದು ಬೆಳಗ್ಗೆ 8.10 ರಿಂದ 8.45ರ ಸಮಯದಲ್ಲಿ ಬೇಡಗಂಪಣ ಸಮುದಾಯದಂತೆ ಧಾರ್ಮಿಕ ವಿಧಿ ವಿಧಾನ ನಡೆಯಿತು. ಬೇಡಗಂಪಣ ಸಮುದಾಯದ 101 ಹೆಣ್ಣು ಮಕ್ಕಳು ಅಲಂಕೃತ ಬ್ರಹ್ಮರಥಕ್ಕೆ ಬೆಲ್ಲದ ಆರತಿ ಬೆಳಗುತ್ತಿದ್ದಂತೆ ತೇರು ಎಳೆಯಲಾಯಿತು. ಸಾವಿರಾರು ಭಕ್ತರು ಹಣ್ಣು, ಜವನ, ನಾಣ್ಯಗಳನ್ನು ರಥಕ್ಕೆ ಎಸೆದು ಹರಕೆ ತೀರಿಸಿದರು.
ವೆಂಕಟೇಶ್ ಎಂಎಲ್ಎ ಆಗಲೆಂದು ಹಣ್ಣು - ಜವನ: ಬಿಜೆಪಿ ಪಕ್ಷದಿಂದ ಹನೂರು ಕ್ಷೇತ್ರದಲ್ಲಿ ಸ್ಪರ್ಧಿಸಲು ಸಾಕಷ್ಟು ಕಸರತ್ತು ನಡೆಸುತ್ತಿರುವ ವೆಂಕಟೇಶ್ ಈ ಬಾರಿ ಎಂಎಲ್ಎ ಆಗಲೆಂದು ಚಿರಂಜೀವಿ ಎಂಬ ಅಭಿಮಾನಿ ಪ್ರಾರ್ಥಿಸಿ ರಥಕ್ಕೆ ಹಣ್ಣು, ಜವನ ಎಸೆದಿದ್ದಾನೆ. ಈ ಹಿಂದೆಯೂ ಮಾದಪ್ಪನ ಬೆಟ್ಟದಲ್ಲಿ ಆರ್ಸಿಬಿ ತಂಡಕ್ಕೆ ಗೆಲುವು ಸಿಗಲೆಂದು ಅಭಿಮಾನಿಗಳು ಹಣ್ಣು - ಜವನ ಎಸೆದು ಗಮನ ಸೆಳೆದಿದ್ದರು.