ಚಾಮರಾಜನಗರ : ರಾಜ್ಯದ ಪ್ರಮುಖ ದೇಗುಲಗಳಲ್ಲಿ ಗುರುತಿಸಿಕೊಂಡ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಆರ್ಥಿಕ ವ್ಯವಹಾರ ಚೇತರಿಕೆ ಕಾಣುತ್ತಿದೆ.
ಅನ್ಲಾಕ್ 2, 3 ರಲ್ಲಿ 7-8 ಸಾವಿರದಷ್ಟು ಬರುತ್ತಿದ್ದ ಭಕ್ತರ ಸಂಖ್ಯೆ, ಈಗ ಎರಡರಷ್ಟಾಗಿದೆ. ಇಂದು ದೇಗುಲಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ 10 ಸಾವಿರ ದಾಟಿದೆ. ಲಾಡು ಮಾರಾಟದಲ್ಲಿಯೂ ಏರಿಕೆಯಾಗಿದೆ. ಸರಾಸರಿ 8-10 ಸಾವಿರ ಲಾಡು ಮಾರಾಟವಾಗುತ್ತಿದೆ. ವಾರಾಂತ್ಯದ ದಿನಗಳಲ್ಲಿ ಮಾರಾಟ ಹೆಚ್ಚಾಗುತ್ತಿದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.
ಇಂದಿನಿಂದ ಪ್ರಾಧಿಕಾರದ ಮೂರು ಬಸ್ಗಳನ್ನು ರಸ್ತೆಗೆ ಇಳಿಸಲಾಗಿದೆ. ಭಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನೆರಡು ಬಸ್ಗಳನ್ನು ಸೇವೆಗೆ ಮುಕ್ತ ಮಾಡಲಿದ್ದೇವೆ. ಯಾವುದೇ ರಥೋತ್ಸವ ಸೇವೆ, ವಾಸ್ತವ್ಯಕ್ಕೆ ಅವಕಾಶ ನೀಡಿರುವುದಿಲ್ಲ, ಭಕ್ತರ ಸಂಖ್ಯೆ ಮಾತ್ರ ಗಣನೀಯವಾಗಿ ಏರಿಕೆಯಾಗುತ್ತಿದೆ ಎಂದು ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಈಟಿವಿ ಭಾರತದೊಂದಿಗೆ ಹಂಚಿಕೊಂಡರು.
ಅನಧಿಕೃತ ವಾಸ್ತವ್ಯ : ಮಲೆಮಹದೇಶ್ವರ ಬೆಟ್ಟದಲ್ಲಿ ವಾಸ್ತವ್ಯಕ್ಕೆ ಇನ್ನು ಅವಕಾಶ ಇಲ್ಲದಿರುವುದರಿಂದ ಬೆಟ್ಟದ ಯಾತ್ರಿನಿವಾಸಗಳಲ್ಲಿ, ಸಾಲೂರು ಮಠದ ಆವರಣದಲ್ಲಿ ಅನಧಿಕೃತವಾಗಿ ಬಿಡಾರ ಹೂಡುತ್ತಿದ್ದಾರೆ. ಮಹದೇಶ್ವರ ಬೆಟ್ಟದ ತಪ್ಪಲಾದ ತಾಳಬೆಟ್ಟದಲ್ಲಿ ನಿತ್ಯ ಸಂಜೆ ನಂತರ ಬೆಟ್ಟಕ್ಕೆ ಪ್ರವೇಶಿಸಲು ಅಥವಾ ತಾಳಬೆಟ್ಟದಲ್ಲೇ ಉಳಿಯಲು ಅವಕಾಶ ಕೊಡಿ ಎಂದು ಪೊಲೀಸರ ಜೊತೆ ದಿನ ರಾತ್ರಿ ಭಕ್ತರು ಜಗಳಕ್ಕೆ ನಿಲ್ಲುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸರು ಅಧಿಕಾರಿಯೊಬಹ್ಬರು ತಿಳಿಸಿದರು.
ಸಾಮಾಜಿಕ ಅಂತರ, ಸರ್ಕಾರದ ಮಾರ್ಗಸೂಚಿ ಅನ್ವಯ ವಾಸಕ್ಕೆ ಅನುಕೂಲ ಮಾಡಿಕೊಡಿ. ಹೀಗೆ ಸೌಲಭ್ಯ ನೀಡಿದ್ರೇ ಯಾರೂ ಕೂಡ ಅನಧಿಕೃತ ಪ್ರವೇಶ, ವಾಸ ಮಾಡುವುದಿಲ್ಲ ಎಂದು ಭಕ್ತಾಧಿಕಾರಿಗಳು ಆಗ್ರಹಿಸಿದರು.