ಚಾಮರಾಜನಗರ: ಬೆಳಕಿನ ಹಬ್ಬದ ಸಂಭ್ರಮಕ್ಕೆ ಪ್ರಸಿದ್ಧ ಯಾತ್ರಾ ಸ್ಥಳವಾದ ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟ ಸಜ್ಜಾಗಿದೆ. ರಾಜ್ಯ-ಅನ್ಯ ರಾಜ್ಯಗಳಿಂದ ಲಕ್ಷಾಂತರ ಮಂದಿ ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.
ಇಂದಿನಿಂದ ಬೆಟ್ಟದಲ್ಲಿ ಮೂರು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ. ಮಂಗಳವಾರ ದೀಪಾವಳಿ ರಥೋತ್ಸವ ನಡೆಯುವುದರಿಂದ ಅಂದಾಜು ಲಕ್ಷಾಂತರ ಭಕ್ತಾದಿಗಳು ಮಾದಪ್ಪನ ಬೆಟ್ಟಕ್ಕೆ ಆಗಮಿಸುವ ಸಾಧ್ಯತೆ ಇದೆ. ಪ್ರಾಧಿಕಾರ 24 ಗಂಟೆ ನಿರಂತರ ದಾಸೋಹ ವ್ಯವಸ್ಥೆ ಕಲ್ಪಿಸಿದೆ.
ಇಂದು ಬೇಡ ಗಂಪಣ ಸಮುದಾಯದ ಬಾಲಕಿಯರು ಮಧ್ಯಾಹ್ನ ಹಾಲರವೆ ಸೇವೆ ಸಲ್ಲಿಸಿದರು. 108 ಮಂದಿ ಕನ್ಯೆಯರು ಅಂತರಗಂಗೆಯಿಂದ ಪವಿತ್ರ ಅಮೃತ ಗಂಗೆಯನ್ನು ಕಲಷದಲ್ಲಿ ತಂದು ಸ್ವಾಮಿಯ ಅಭಿಷೇಕಕ್ಕೆ ನೀಡಿದರು.
ಸ್ವಾಮಿಯ ಸನ್ನಿಧಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕೊಳ್ಳೇಗಾಲ ಡಿವೈಎಸ್ಪಿ ನೇತೃತ್ವದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಭಕ್ತಸಾಗರವೇ ಬೆಟ್ಟಕ್ಕೆ ಹರಿದು ಬರುತ್ತಿರುವುದರಿಂದ ಮಲೆಮಹದೇಶ್ವರ ಬೆಟ್ಟ ರಸ್ತೆಯಲ್ಲಿ ಪದೇಪದೆ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಮಲೆಮಹದೇಶ್ವರ ವನ್ಯಜೀವಿಧಾಮ ಪ್ಲಾಸ್ಟಿಕ್ ರಾಕ್ಷಸನ ಹಾವಳಿ ತಡೆಗೆ ಸ್ವಯಂಸೇವಕರನ್ನೂ ನೇಮಿಸಿದೆ.