ಚಾಮರಾಜನಗರ : ಪಾಲಾರ್ ನದಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಮೃತರನ್ನು ತಮಿಳುನಾಡಿನ ಗೋವಿಂದಪಾಡಿ ಗ್ರಾಮದ ರಾಜ (45) ಎಂದು ಗುರುತಿಸಲಾಗಿದೆ. ತಮಿಳುನಾಡು ಗಡಿಯಲ್ಲಿನ ಪಾಲರ್ ಚೆಕ್ಪೋಸ್ಟ್ ಸಮೀಪದ ಪಾಲರ್ ಎಂಬಲ್ಲಿ ಶವ ದೊರೆತಿದೆ.
ಸೇಲಂ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ತನಿಖೆ ಮುಂದುವರೆಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಕಳ್ಳಬೇಟೆಗೆ ಬಂದವರಲ್ಲಿ ಈತನೂ ಸೇರಿದ್ದನೆಂಬ ಶಂಕೆ ವ್ಯಕ್ತವಾಗಿದೆ. ಕಳೆದ 14ರ ರಾತ್ರಿ ಬೇಟೆಯಾಡಲು ಬಂದಿದ್ದ ಅಪರಿಚಿತರಿಂದ ಅರಣ್ಯ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆದಿತ್ತು. ಆತ್ಮರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ಕೂಡ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಈ ವೇಳೆ ಸ್ಥಳದಲ್ಲಿ ನಾಡ ಬಂದೂಕು, ಬೇಟೆಗಾರರು ತಲೆ ಮೇಲೆ ಅಳವಡಿಸಿಕೊಂಡಿದ್ದ ಕ್ಯಾಪ್ ಟಾರ್ಚ್ಗಳು, ಜಿಂಕೆ ಶವ ಪತ್ತೆಯಾಗಿದ್ದವು.
ಗುಂಡಿನ ದಾಳಿ ಸಂಬಂಧ ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ನಾಲ್ವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿತ್ತು. ನದಿ ದಡದಲ್ಲಿ ಸಿಕ್ಕಿದ್ದ ಎರಡು ಜಿಂಕೆ ಶವಗಳನ್ನು ಮರಣೋತ್ತರ ಪರೀಕ್ಷೆ ಬಳಿಕ ಕಾಡಿನಲ್ಲಿ ಸುಡಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ಮಲೆಮಹದೇಶ್ವರ ಬೆಟ್ಟ ಪಿಐ, ತಮಿಳುನಾಡು ಪೊಲೀಸರ ವ್ಯಾಪ್ತಿಯಲ್ಲಿ ಓರ್ವನ ಶವ ಪತ್ತೆಯಾಗಿದ್ದು, ತಾವು ಭೇಟಿ ಕೊಟ್ಟಿಲ್ಲ. ಹಾಗಾಗಿ ಪ್ರಕರಣದ ತನಿಖೆ ಬಗ್ಗೆ ಹೆಚ್ಚು ಹೇಳಲಾಗಲ್ಲ ಎಂದಿದ್ದಾರೆ. ಸದ್ಯ ಗಡಿ ಭಾಗವಾದ ಪಾಲರ್ನಲ್ಲಿ ಬಿಗುವಿನ ವಾತಾವರಣ ಇರುವುದರಿಂದ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಹೋಂ ಗಾರ್ಡ್ಸ್ ಸೇರಿದಂತೆ ಅಗ್ನಿಶಾಮಕ ದಳದವರೂ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಇದನ್ನೂ ಓದಿ: ಅಥಣಿ: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿ, ಇಬ್ಬರಿಗೆ ಗಂಭೀರ ಗಾಯ