ಚಾಮರಾಜನಗರ: ಕರ್ತವ್ಯದ ನಿಮಿತ್ತ ಪ್ರವಾಸ, ವಸತಿ ಗೃಹ ಮತ್ತು ಕಚೇರಿಯಲ್ಲಿನ ವಸ್ತುಗಳ ಖರೀದಿ ನೆಪದಲ್ಲಿ ಚಾಮರಾಜನಗರ ಜಿ.ಪಂ ಸಿಇಒ ಹರ್ಷಲ್ ಭೋಯರ್ ಅವರು ಲಕ್ಷಾಂತರ ರೂ. ಭ್ರಷ್ಟಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದ ಮಹೇಶ್ ಎಂಬ ಸಾಮಾಜಿಕ ಕಾರ್ಯಕರ್ತ ಅಪರ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದು, ಹಣ ದುರುಪಯೋಗದ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಕಳೆದ ಮಾರ್ಚ್ನಲ್ಲಿ ಕಚೇರಿಗೆ ಸೋಫಾ ಸೆಟ್, ಕುರ್ಚಿ ಖರೀದಿಗಾಗಿ 99 ಸಾವಿರ ರೂ., ಅದಾದ ಬಳಿಕ ಪೀಠೋಪಕರಣಗಳಿಗಾಗಿ 98 ಸಾವಿರ ರೂ., ವಿಧಾನ ಮಂಡಲದ ಕಾಗದ ಪತ್ರಗಳ ಸಮಿತಿ ಚಾಮರಾಜನಗರಕ್ಕೆ ಬಂದಿದ್ದ ವೇಳೆ ವಾಸ್ತವ್ಯ ಹಾಗೂ ಉಪಹಾರದ ವ್ಯವಸ್ಥೆಗಾಗಿ 59 ಸಾವಿರ ರೂ., ಸಿಇಒ ಅವರ ನಿವಾಸದ ಗೃಹ ಬಳಕೆ ವಸ್ತುಗಳಿಗಾಗಿ 3.16 ಲಕ್ಷ ರೂ., ನಿವಾಸದ ಕೊಳಾಯಿ ದುರಸ್ತಿಗಾಗಿ 99 ಸಾವಿರ ರೂ., ಕಾಗದ ಪತ್ರ ಸಮಿತಿಯು ವಾಸ್ತವ್ಯಕ್ಕಾಗಿ ಕೆ.ಗುಡಿಯ ಜಂಗಲ್ ಲಾಡ್ಜ್ಗೆ 97 ಸಾವಿರ ರೂ., ಹನೂರು ತಾಪಂ ಕಚೇರಿಯ ಪೀಠೋಪಕರಣಕ್ಕಾಗಿ 4.97 ಲಕ್ಷ ರೂ. ಅಕ್ರಮವಾಗಿ ಹಣ ಬಳಕೆ ಮಾಡಿದ್ದಾರೆ. ಈ ಕುರಿತು ಸೂಕ್ಷ್ಮವಾಗಿ ತನಿಖೆಯಾಗಬೇಕೆಂದು ಮಹೇಶ್ ಒತ್ತಾಯಿಸಿದ್ದಾರೆ.
ಒಟ್ಟು 13 ಲಕ್ಷ ರೂ. ನಷ್ಟು ಅವ್ಯವಹಾರ ಆಗಿದೆ ಎಂದು ಮಹೇಶ್ ಆರೋಪಿಸಿದ್ದು, ಹಣ ಬಳಕೆಗೆ ಅವಕಾಶ ಇಲ್ಲದಿದ್ದಾಗಲೂ ಬೆಡ್ ಶೀಟ್, ಬ್ಲಾಂಕೆಟ್, ವಾಷಿಂಗ್ ಮೆಷಿನ್ ಖರೀದಿಸಿದ್ದಾರೆ. ಸರ್ಕಾರಿ ಅತಿಥಿ ಗೃಹವಿದ್ದಾಗಲೂ ಕಾಗದ ಲೆಕ್ಕಪತ್ರ ಸಮಿತಿಗೆ ರೆಸಾರ್ಟ್ನಲ್ಲಿ ರೂಂ ಮಾಡುವ ಮೂಲಕ ಅಕ್ರಮ ಎಸಗಲಾಗಿದ್ದು ಸೂಕ್ತ ತನಿಖೆ ಆಗಬೇಕೆಂದು ಅವರು ಒತ್ತಾಯಿಸಿದ್ದಾರೆ.
ಕದಂಬ ಕನ್ನಡ ಸೇನೆ ಆಕ್ರೋಶ:
ಜಿ.ಪಂ ಸಿಇಒ ವಿರುದ್ಧ ದೂರು ದಾಖಲಾಗಿರುವ ಸಂಬಂಧ ಕದಂಬ ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಅಂಬರೀಶ್ ಮಾತನಾಡಿ, ಸಿಇಒ ಅವರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಹಣ ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ದೂರು ಕೇವಲ ದೂರಾಗೆ ಉಳಿಯದೆ, ಸೂಕ್ತ ತನಿಖೆ ನಡೆದು ಸಾರ್ವಜನಿಕರ ಹಣಕ್ಕೆ ಸೂಕ್ತ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.
ಸಿಇಒ ಪ್ರತಿಕ್ರಿಯೆ:
ಖರ್ಚು ಮಾಡಿರುವ ಹಣಕ್ಕೆ ಜಿ.ಪಂ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. ಗೃಹಪಯೋಗಿ ವಸ್ತುಗಳನ್ನು ಖರೀದಿಸಲು ಅವಕಾಶ ಇದೆ. ಯಾವುದೇ ಅಕ್ರಮ ನಡೆದಿಲ್ಲ. ಮೇಲಧಿಕಾರಿಗಳು ವರದಿ ಕೇಳಿದದೆ ಕೊಡುವೆ. ಎಲ್ಲವೂ ಪಾರದರ್ಶಕವಾಗಿದೆ ಎಂದು ಜಿ.ಪಂ ಸಿಇಒ ಹರ್ಷಲ್ ಭೋಯರ್ ತಿಳಿಸಿದರು.