ಚಾಮರಾಜನಗರ: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಅದರ ಬಿಸಿ ಎಲ್ಲರಿಗೂ ತಟ್ಟಿದೆ. ಮದ್ಯಪ್ರಿಯರಂತೂ ಪತರಗುಟ್ಟಿದ್ದಾರೆ. ಆದರೆ, ಈಗ ಅವರು ತೋರುತ್ತಿರುವ ವರ್ತನೆ ಒಂದು ರೀತಿ ಎಲ್ಲರಿಗೂ ಮಾದರಿಯಾಗಿದೆ.
ಹೌದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ಅಬಕಾರಿ ಡಿಸಿ ಮಾದೇಶ್ ಖಡಕ್ ಸೂಚನೆ ಕೊಟ್ಟಿರುವ ಹಿನ್ನೆಲೆ ಜಿಲ್ಲೆಯ 10 ಕ್ಕೂ ಹೆಚ್ಚು ಎಂಆರ್ಪಿ ಮದ್ಯದಂಗಡಿಗಳಲ್ಲಿ ಸಾಮಾಜಿಕ ಅಂತರ ಪಾಲನೆಯಾಗುತ್ತಿದೆ. ಎರಡು ಅಡಿ ಅಂತರದಲ್ಲಿ ಅಬಕಾರಿ ಇಲಾಖೆ ಬಾಕ್ಸ್ಗಳನ್ನು ಮಾಡಿದ್ದು ಮದ್ಯ ಕೊಳ್ಳಲು ಬರುವವರು ಬಾಕ್ಸ್ನೊಳಗೆ ನಿಂತು ಮದ್ಯ ತೆಗೆದುಕೊಳ್ಳಬೇಕು. ಈ ಮೂಲಕ ಕೊರೊನಾ ವಿರುದ್ಧ ಪ್ರಾಕ್ಟಿಕಲ್ ಹೋರಾಟಕ್ಕೆ ಮುಂದಾಗಿದ್ದಾರೆ.
ಈಗಾಗಲೇ ಎಂಎಸ್ಐಎಲ್, ವೈನ್ ಸ್ಟೋರ್ ಹೊರತುಪಡಿಸಿ ಬಾರ್ ಅಂಡ್ ರೆಸ್ಟೋರೆಂಟ್ ಬಂದ್ದಾಗಿದ್ದರಿಂದ ಎಂಆರ್ಪಿ ಅಂಗಡಿಗಳಲ್ಲಿ ಜನಜಂಗುಳಿಯೇ ನೆರೆಯುತ್ತಿತ್ತು. ಜನಜಂಗುಳಿಯಲ್ಲಿ ಕೊರೊನಾ ವೈರಸ್ ಹರಡದಿರಲಿ ಎಂದು ಅಬಕಾರಿ ಇಲಾಖೆ ಜಾರಿಗೆ ತಂದಿರುವ ಕೇರಳ ಪ್ಲಾನ್ಗೆ ಕುಡುಕರು ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ.
ಇನ್ನು ಈ ಕುರಿತು ಅಬಕಾರಿ ಡಿಸಿ ಮಾದೇಶ್ ಮಾತನಾಡಿ, ಎಂಎಸ್ಐಎಲ್ ಅಂಗಡಿಗಳಲ್ಲಿ ಜನದಟ್ಟನೆ ಆಗುವ ಕಾರಣದಿಂದ ಸೋಷಿಯಲ್ ಡಿಸ್ಟೆನ್ಸ್ ಇರಲೆಂದು ಕೇರಳ ಶಾಪ್ಗಳಲ್ಲಿರುವಂತೆ ಸಾಲಾಗಿ ನಡುವೆ ಅಂತರವಿರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನು, ಎಂಎಸ್ಐಎಲ್ ಎಡಿಒ ಆಗಿರುವ ಮಹಾದೇವಯ್ಯ ಮಾತನಾಡಿ, ವೈರಸ್ ಹರಡಿದರಲೆಂದು ಅಬಕಾರಿ ಡಿಸಿ ಆದೇಶದ ಮೇರೆಗೆ ಮದ್ಯ ಕೊಳ್ಳಲು ಬರುವವರು ಎರಡು ಮೂರು ಅಡಿ ಅಂತರದಲ್ಲಿ ಬರಲೆಂದು ಬಾಕ್ಸ್ಗಳನ್ನು ಮಾಡಿರುತ್ತಾರೆ. ಇದಕ್ಕೆ ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆಂದು ತಿಳಿಸಿದರು.