ಚಾಮರಾಜನಗರ: ಹೊಸವರ್ಷ ಸಂಭ್ರಮಾಚರಣೆಯ ಬಂದೋಬಸ್ತ್ ಕರ್ತವ್ಯ ನಿರ್ವಹಿಸಿ ಹಿಂತಿರುಗುವಾಗ ಆಯತಪ್ಪಿ ಬೈಕ್ನಿಂದ ಬಿದ್ದ ಪೊಲೀಸ್ ಪೇದೆ ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ಮುಖ್ಯರಸ್ತೆಯ ಹರಳೆ ಬಳಿ ನಡೆದಿದೆ.
ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆರ್.ಎಸ್. ದೊಡ್ಡಿ ಗ್ರಾಮದ ಸಿದ್ದರಾಜು ಘಟನೆಯಲ್ಲಿ ಮೃತಪಟ್ಟವರು.
ಇವರನ್ನು ಹೊಸ ವರ್ಷ ಸಂಭ್ರಮಾಚರಣೆಯ ಬಿಗಿ ಬಂದೋಬಸ್ತ್ಗಾಗಿ ನರೀಪುರ ಪಾಯಿಂಟ್ಗೆ ನಿಯೋಜಿಸಲಾಗಿತ್ತು. ರಾತ್ರಿ ಕರ್ತವ್ಯ ಮುಗಿಸಿ ಹಿಂತಿರುಗುವಾಗ ರಸ್ತೆ ಗುಂಡಿಯಲ್ಲಿ ಬೈಕ್ ನಿಯಂತ್ರಣ ತಪ್ಪಿದೆ. ಪರಿಣಾಮ ಪಕ್ಕದ ಚಾನಲ್ಗೆ ಬೈಕ್ ಸಮೇತ ಅವರು ಬಿದ್ದಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.