ಚಾಮರಾಜನಗರ: ಪೆಟ್ರೋಲ್ ದರ ನೂರರ ಗಡಿ ದಾಟುತ್ತಿರುವುದರಿಂದ ಇಂದು ಕಾಂಗ್ರೆಸ್ ವತಿಯಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಆರ್.ಧ್ರುವನಾರಾಯಣ ನೇತೃತ್ವದಲ್ಲಿ ಕೈ ಜನಪ್ರತಿನಿಧಿಗಳು ಪೆಟ್ರೋಲ್ ಬಂಕ್ವರೆಗೆ ಮೆರವಣಿಗೆ ನಡೆಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಭಿತ್ತಿಪತ್ರ ಪ್ರದರ್ಶಿಸಿದರು. ಬ್ಯಾಂಡ್ ಸೆಟ್, ತಮಟೆ ಸದ್ದಿನೊಂದಿಗೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಬ್ಯಾಟ್ಸ್‌ಮನ್ ವೇಷಭೂಷಣ ಧರಿಸಿ ಬ್ಯಾಟ್ ಹೆಲ್ಮೆಟ್ಗಳನ್ನು ತೋರಿಸುತ್ತಾ ಪೆಟ್ರೋಲ್ ನೂರರ ಗಡಿ ಬಂದಿದ್ದಕ್ಕೆ ವ್ಯಂಗ್ಯವಾಡಿ ಆಕ್ರೋಶ ಹೊರ ಹಾಕಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಮಾತನಾಡಿ, ಕೇಂದ್ರ ಸರ್ಕಾರ ಪದೇ ಪದೆ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರ ಏರಿಕೆ ಮಾಡುವ ಮೂಲಕ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ನರೇಂದ್ರ ಮೋದಿ ಅವರು 2014 ರಂದು ನೀಡಿದ್ದ ಭರವಸೆಯಂತೆ ನಡೆದುಕೊಳ್ಳದೇ ದರ ಏರಿಕೆಯಲ್ಲಿ ನಿರತರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಕಾರ್ಯಾಧ್ಯಕ್ಷರ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ:
ಪೆಟ್ರೋಲ್ ಬೆಲೆ 100 ರೂ. ಹಾಗೂ ಡೀಸೆಲ್ ಬೆಲೆ 95 ರೂ.ಗೆ ಏರಿಕೆಯಾಗಿರುವುದನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ರಿಸರ್ವ ಬ್ಯಾಂಕ್ ರಾಜ್ಯ ಶಾಖೆ ಮುಂಭಾಗದ ಪೆಟ್ರೋಲ್ ಬಂಕ್ ಎದುರು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಾರ್ಯಾಧ್ಯಕ್ಷರಿಬ್ಬರೂ ದ್ವಿಚಕ್ರ ವಾಹನದಲ್ಲಿ ಆಗಮಿಸಿ ಪೆಟ್ರೋಲ್ ತುಂಬಿಸಿಕೊಂಡು 100 ರೂ. ನೀಡಿ ನಂತರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಉಡುಪಿಯಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ:
ಉಡುಪಿ ಸರ್ವಿಸ್ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಪ್ರತಿಭಟನೆ ನಡೆಸಿದರು. ಯುಪಿಎ ಸರಕಾರ ಇದ್ದಾಗ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ನಾಯಕರು ಈಗ ಇಂಧನ, ದಿನಬಳಕೆ ವಸ್ತುಗಳ ನಿರಂತರ ಬೆಲೆ ಏರಿಕೆಗೆ ಮೌನವಾಗಿದ್ದಾರೆ ಅಂತಾ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಕೇಂದ್ರ, ರಾಜ್ಯ ಸರಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ್ರು.
ಮಂಗಳೂರಿನಲ್ಲಿ '100 ನಾಟ್ ಔಟ್' ಕೇಕ್ ಕಟ್ ಮಾಡಿ ಪ್ರತಿಭಟನೆ:
ನಿರಂತರವಾಗಿ ತೈಲ ಬೆಲೆ ಏರಿಕೆಯಾಗುತ್ತಿರುವುದನ್ನು ವಿರೋಧಿಸಿ '100 ನಾಟ್ ಔಟ್' ಕೇಕ್ ಕಟ್ ಮಾಡಿ ದ.ಕ.ಜಿಲ್ಲಾ ಕಾಂಗ್ರೆಸ್ ನಗರದ ಕೆಪಿಟಿ ಬಳಿಯ ಪೆಟ್ರೋಲ್ ಬಂಕ್ ಮುಂಭಾಗ ಪ್ರತಿಭಟನೆ ನಡೆಸಿತು. ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಈ ಕೊರೊನಾ ಸಂಕಷ್ಟ ಕಾಲದಲ್ಲಿಯೂ ಕೇಂದ್ರ ಸರ್ಕಾರ 18-19 ಸಲ ತೈಲಬೆಲೆ ಏರಿಕೆ ಮಾಡಿದೆ. ಆದ್ದರಿಂದ ನಮ್ಮ ನಾಯಕರ ನಿರ್ಧಾರದಂತೆ ಪ್ರತಿ ಪೆಟ್ರೋಲ್ ಬಂಕ್ ಮುಂದೆ 100 ನಾಟ್ ಔಟ್ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದ್ರು. ಈ ಸಂದರ್ಭ ಮಾಜಿ ಸಚಿವ ಜೆ.ಆರ್.ಲೋಬೊ, ಮಾಜಿ ಶಾಸಕರಾದ ಮೊಯ್ದೀನ್ ಬಾವಾ, ಶಕುಂತಲಾ ಶೆಟ್ಟಿ, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಕಾಂಗ್ರೆಸ್ ಮುಖಂಡರಾದ ಐವನ್ ಡಿಸೋಜಾ, ಮಿಥುನ್ ರೈ, ಶಶಿಧರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
ಮೈಸೂರಿನಲ್ಲಿ ಪೆಟ್ರೋಲ್, ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ:
ಮೈಸೂರಿನಲ್ಲಿ ವಿರುದ್ಧ ತಮಟೆ ಬಡಿಯುವ ಮೂಲಕ ಕಾಂಗ್ರೆಸ್ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಕಚೇರಿ ಸಮೀಪವಿರುವ ಪೆಟ್ರೋಲ್ ಬಂಕ್ಗಳ ಮುಂದೆ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ಪ್ರಧಾನಿ ಮೋದಿ ಅವರು ಬೆಲೆ ಇಳಿಕೆ ಮಾಡಲು ಕ್ರಮ ಕೈಗೊಳ್ಳದೇ ಮೌನವಹಿಸಿದ್ದಾರೆ ಎಂದು ಕಿಡಿಕಾರಿದರು.
ಟ್ರೋಲ್ ದರ ಏರಿಕೆ ಕಾಂಗ್ರೆಸ್ ಪ್ರತಿಭಟನೆ:
ಶಿವಮೊಗ್ಗದಲ್ಲಿ ಕಾಂಗ್ರೆಸ್ನ ಎಲ್ಲ ಬ್ಲಾಕ್ಗಳು, ಹಾಲಿ, ಮಾಜಿ ಶಾಸಕರುಗಳು ಜಿಲ್ಲಾದ್ಯಂತ ಪೆಟ್ರೋಲ್ ಬಂಕ್ಗಳ ಮುಂದೆ ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಎಂಎಲ್ಸಿ ಆರ್. ಪ್ರಸನ್ನ ಕುಮಾರ್ ನೇತೃತ್ವದಲ್ಲಿ ವಿನೋಬನಗರದ ಪೆಟ್ರೋಲ್ ಬಂಕ್ ಮುಂಭಾಗ ಬಾಳೆದಿಂಡು ಹಿಡಿದು ಪ್ರತಿಭಟನೆ ನಡೆಸಿದರು. ಬಾಳೆದಿಂಡು ಕಟ್ಟುವುದು ಸಂಭ್ರಮಾಚರಣೆಗಾಗಿ, ಈಗ ಪೆಟ್ರೋಲ್ ದರ ಏರಿಕೆಯನ್ನು ಸಂಭ್ರಮ ಪಡಬೇಕೇ ಎಂದು ಅಣಕಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಇಂಧನ ಬೆಲೆ ಏರಿಕೆ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆ:
ಮಂಡ್ಯ ನಗರದ ಸಂಜಯ್ ವೃತ್ತದಲ್ಲಿರುವ ಪೆಟ್ರೋಲ್ ಬಂಕ್ ಬಳಿ ಮಾಜಿ ಶಾಸಕ ರಮೇಶ್ ಬಾಬು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಈ ಕೂಡಲೇ ತೈಲ ದರ ಇಳಿಸುವಂತೆ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ರು. ಮಾಜಿ ಶಾಸಕ ರಮೇಶ್ ಬಾಬು ಮಾತನಾಡಿ, ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೇಂದ್ರ ಸರ್ಕಾರದ ವಿರುದ್ಧ ಮುಷ್ಕರಕ್ಕೆ ಕರೆ ಕೊಟ್ಟಿರುವ ಹಿನ್ನೆಲೆ ನಗರದ 14 ಪೆಟ್ರೋಲ್ ಬಕ್ ಬಳಿ ಹೋರಾಟ ನಡೆಸಿದ್ದೇವೆ. ಇಂಧನವನ್ನು ಬಡವರು ಹೆಚ್ಚಾಗಿ ಬಳಸುತ್ತಾರೆ. ದುಬಾರಿ ಬೆಲೆ ತೆತ್ತು ಬದುಕು ದೂಡುವ ಸಂಕಷ್ಟದ ಸ್ಥಿತಿಯನ್ನು ಮೋದಿ ನಿರ್ಮಿಸಿದ್ದಾರೆ. ಮೋದಿ ಜನರ ರಕ್ತ ಹೀರುತ್ತಿದ್ದಾರೆ. ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ಕಿಡಿಕಾರಿದರು.
ಪೆಟ್ರೋಲ್ ಬಂಕ್ ಬಳಿ ಧರಣಿ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು:
ಪೆಟ್ರೋಲ್ ಬಂಕ್ ಸಿಬ್ಬಂದಿ ಕೂಡ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಂಕ್ ಬಂದು ಬಳಿ ಬಂದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದು ಅಚ್ಚರಿ ಮೂಡಿಸಿತ್ತು. ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ ತುಮಕೂರು ನಗರದ ವಿವಿಧ ಪೆಟ್ರೋಲ್ ಬಂಕ್ ಗಳ ಬಳಿ ಕಾಂಗ್ರೆಸ್ ಕಾರ್ಯಕರ್ತರು ಧರಣಿ ನಡೆಸಿದರು. ಬಂಕ್ಗಳ ಬಳಿ ಧರಣಿ ನಡೆಸದಂತೆ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿದರು. ಅಲ್ಲದೆ ಬಂಕ್ಗಳಲ್ಲಿ ಬಳಿ ಯಾವುದೇ ರೀತಿಯ ಪ್ರತಿಕೃತಿಗಳನ್ನು ದಹನ ಮಾಡದಂತೆ ಮನವಿ ಮಾಡಿಕೊಂಡಿದ್ದು, ಸಾಮಾನ್ಯವಾಗಿತ್ತು.