ಚಾಮರಾಜನಗರ ಜಿಲ್ಲೆಯಲ್ಲಿ ಕೈ ಮತ್ತು ಕಮಲದ ರಾಜಕೀಯ ಫೈಟ್ ಮುಂದುವರೆದಿದೆ. ಇಂದು ಸಚಿವ ಸುರೇಶ್ ಕುಮಾರ್ ಹಾಗೂ ಶಾಸಕ ನಿರಂಜನಕುಮಾರ್ ವಿರುದ್ಧ ಶಾಸಕ ಪುಟ್ಟರಂಗಶೆಟ್ಟಿ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸ್ಥಳೀಯ ಶಾಸಕನಾದ ನನ್ನನ್ನು ಕರೆಯದೇ ನನ್ನ ಕ್ಷೇತ್ರದಲ್ಲಿ ಅಧಿಕಾರಿಗಳ ಅಭಿವೃದ್ಧಿ ಸಭೆಗಳನ್ನು ನಡೆಸುವುದರ ಮೂಲಕ ಉಸ್ತುವಾರಿ ಸಚಿವ ಸುರೇಶ್ ಕುಮಾರ್, ನನ್ನನ್ನು ಕಡಗಣಿಸುತ್ತಿರುವುದು ಸರಿಯಲ್ಲ ಎಂದರು.
ಜಿಲ್ಲೆಯ ಅಭಿವೃದ್ಧಿ ಕಾರ್ಯದಲ್ಲಿ ನನ್ನದೂ ಪಾತ್ರವಿದೆ. ಕೋವಿಡ್-19 ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ನಿರಂಜನ್ ಕುಮಾರ್ ಸುಳ್ಳು ಹೇಳಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಕಡೆಗಣಿಸುತ್ತಿರುವುದರಲ್ಲಿ ನಿರಂಜನಕುಮಾರ್ ಕೈವಾಡ ಹೆಚ್ಚಿದೆ ಎಂದು ಆರೋಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಮೂಕರಾಗಿ ಕುಳಿತಿದ್ದರೇ ನಿರಂಜನಕುಮಾರ್ ಅವರೇ ಉಸ್ತುವಾರಿ ಸಚಿವರಂತೆ ಮಾತಾಡುತ್ತಾರೆ. ನನ್ನ ಕ್ಷೇತ್ರದಲ್ಲಿ ಗುಂಡ್ಲುಪೇಟೆ ಶಾಸಕ ನಿರಂಜನಕುಮಾರ್‌ಗೆ ಕೆಲಸವೇನು?. ಅವರು ಅವರ ಕ್ಷೇತ್ರಕ್ಕೆ ಮಾತ್ರ ಸೀಮಿತರಾಗಿರಲಿ ಎಂದು ವಾಗ್ದಾಳಿ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಅಭಿವೃದ್ದಿ ಕೆಲಸಕ್ಕೆ ಬರುತ್ತಿದ್ದಾರಾ ಅಥವಾ ಪಕ್ಷದ ಕೆಲಸ ಮಾಡೋಕೆ ಬರುತ್ತಿದ್ದಾರಾ ಎಂಬ ಸಂಶಯ ಮೂಡಿದೆ. ಕೋವಿಡ್ ಸಮಯದಲ್ಲಿ ರಾಜಕೀಯ ಮಾಡುತ್ತಿರುವುದು ಬಿಜೆಪಿಯೇ ಹೊರತು ನಾವಲ್ಲ ಎಂದು ಕಿಡಿಕಾರಿದರು.
ಕೆಲದಿನಗಳ ಹಿಂದೆಯಷ್ಟೇ ಸುರೇಶ್ ಕುಮಾರ್ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಕರೆದಿಲ್ಲ ಎಂದು ಆರೋಪಿಸಿ ಕೈ ಜನಪ್ರತಿನಿಧಿಗಳು ಪ್ರತಿಭಟಿಸಿದ್ದರು. ಬಳಿಕ, ಶುಕ್ರವಾರ ಗುಂಡ್ಲುಪೇಟೆ ಶಾಸಕ ನಿರಂಜನಕುಮಾರ್ ಕೊರೊನಾ ಸಂಕಷ್ಟದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಬಾರದು ಎಂದು ಹೇಳಿಕೆ ನೀಡಿದ್ದರು.