ಚಾಮರಾಜನಗರ : ಕಾಂಗ್ರೆಸ್ ಜನರ ಅಭಿವೃದ್ಧಿ ಮಾಡುವ ಪಕ್ಷವಲ್ಲ, ವರ್ಷಕ್ಕೆ 5 ತಿಥಿ ಮಾಡುವ ತಿಥಿ ಪಾರ್ಟಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಆಯೋಜಿಸಿದ್ದ ಜನಸೇವಕ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ದೇಶದಲ್ಲಿ 5 ತಿಥಿಗಳನ್ನು ಮಾಡುವ ಮೂಲಕ ತಿಥಿಗಳ ಪಕ್ಷವಾಗಿದೆ. ಕಾಂಗ್ರೆಸ್ಗೆ ದೇಶದಲ್ಲಿ ಪ್ರಮುಖ ಮೂರು ಶಾಪಗಳು ತಟ್ಟಿವೆ.
ಮಹಾತ್ಮ ಗಾಂಧಿ ಅವರು ಕಂಡಂತಹ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯ ಕನಸಿಗೆ ಬೆಂಕಿ ಇಟ್ಟವರು ಕಾಂಗ್ರೆಸ್ನವರು. ಹೀಗಾಗಿ, ಮಹಾತ್ಮ ಗಾಂಧಿ ಅವರ ಶಾಪ ಕಾಂಗ್ರೆಸ್ಗೆ ತಟ್ಟಿದೆ. ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಮಾಡಿದ ಅನ್ಯಾಯದಿಂದಲೂ ಅವರಿಗೆ ಶಾಪ ತಟ್ಟಿದೆ.
ಕಾಂಗ್ರೆಸ್ ಒಂದು ಕಾಲದಲ್ಲಿ ಗೋವಿನ ಚಿಹ್ನೆ ಇಟ್ಟುಕೊಂಡು ಮತ ಪಡೆದು, ಇಂದು ಗೋ ಹತ್ಯೆಗೆ ಮುಂದಾಗಿರುವುದು ದುರಂತದ ಸಂಗತಿ. ಹೀಗಾಗಿ, ಇಂದು ಗೋವಿನ ಶಾಪ ತಟ್ಟಿದೆ. ಒಟ್ಟಾರೆ ಈ ಮೂರು ಶಾಪಗಳಿಂದ ಕಾಂಗ್ರೆಸ್ ನಾಶವಾಗುತ್ತಿದೆ ಎಂದರು.
ಮಹಾತ್ಮ ಗಾಂಧೀಜಿಯವರ ಮೂರು ಶಾಪ ಕಾಂಗ್ರೆಸ್ಗೆ ತಟ್ಟಿದೆ. ರಾಮರಾಜ್ಯ ಆಗಬೇಕು ಅನ್ನೋದು ಗಾಂಧಿ ಕನಸಾಗಿತ್ತು. ಆದ್ರೆ, ಕಾಂಗ್ರೆಸ್ ಅದನ್ನ ಮಾಡಲಿಲ್ಲ. ಮಹಾತ್ಮ ಗಾಂಧಿಗೆ ಕಾಂಗ್ರೆಸ್ ಆಡಳಿತದಲ್ಲಿ ಭಾರತದ ಪರಿಸ್ಥಿತಿ ಹೇಗಿರುತ್ತೆ ಅಂತಾ ಗೊತ್ತಿತ್ತು. ಅದಕ್ಕೆ ಸ್ವಾತಂತ್ರ್ಯ ನಂತರ ಕಾಂಗ್ರೆಸ್ ವಿಸರ್ಜಿಸುವಂತೆ ಹೇಳಿದ್ದರು.
ಗಾಂಧಿಯ ಗ್ರಾಮ ಸ್ವರಾಜ್ಯ ಪರಿಕಲ್ಪನೆಗೆ ಬೆಳಕು ನೀಡಿದವರು ನರೇಂದ್ರ ಮೋದಿ. ಗಾಂಧಿಯ ಶಾಪ ಕಾಂಗ್ರೆಸ್ಗೆ ತಟ್ಟಿದೆ, ಗಾಂಧಿಯ ಆಶೀರ್ವಾದ ಮೋದಿಯವರ ಮೇಲಿದೆ. ಸಾಮಾನ್ಯ ಹಳ್ಳಿಯ ಹುಡುಗನಾದ ಕಟೀಲ್ ಸಂಸದನಾಗಲು ಅಂಬೇಡ್ಕರ್ ಕಾರಣ. ಕಾಂಗ್ರೆಸ್ಗೆ ಡಾ. ಬಿ.ಆರ್. ಅಂಬೇಡ್ಕರ್ ಶಾಪವೂ ಇದೆ ಎಂದು ಅವರು ಹೇಳಿಕೆ ನೀಡಿದರು.
ಸಿದ್ದರಾಮಯ್ಯ ಐದು ವರ್ಷಗಳ ಕಾಲ ಐದು ಜಯಂತಿಗಳನ್ನ ಮಾಡುವ ಮೂಲಕ ಜನರನ್ನು ತಿರಸ್ಕರಿಸಿದರು. ಅದಕ್ಕೆ ತಕ್ಕಂತೆ ಜನ ಅವರನ್ನ ಕಳೆದ ಚುನಾವಣೆಯಲ್ಲಿ ತಿರಸ್ಕರಿಸಿದ್ದಾರೆ. ಸಿದ್ದರಾಮಯ್ಯ ಜಿಲ್ಲೆ ಬಿಟ್ಟು ಜಿಲ್ಲೆಗೆ ಹೋದರೂ ಗ್ರಾಪಂ ಚುನಾವಣೆಯಲ್ಲಿ ವಿಫಲವಾಗಿದ್ದಾರೆ ಎಂದು ಅವರು ಲೇವಡಿ ಮಾಡಿದರು.
ಓದಿ:ಬಿಜೆಪಿ ಫ್ಲೆಕ್ಸ್ನಲ್ಲಿ ಶಾಸಕ ಮಹೇಶ್ ಫೋಟೋ: ಬಿಜೆಪಿ ವರಿಷ್ಠರೇ ಹಾಕಿಸಿದರಾ ಭಾವಚಿತ್ರ ?
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಚಾಮರಾಜನಗರ ಜಿಲ್ಲೆಯ ನಾಲ್ಕಕ್ಕೆ ನಾಲ್ಕು ಸ್ಥಾನ ಗೆಲ್ತೀವಿ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ಅವರ ಆಡಳಿತ ಮೆಚ್ಚಿದ್ದಾರೆ. ನಮ್ಮ ಆಡಳಿತದಿಂದ ಕಾಂಗ್ರೆಸ್ ಧೂಳೀಪಟವಾಗಲಿದೆ ಎಂದರು.
ಕಾಂಗ್ರೆಸ್ನವರು ನಮ್ಮ ಕಾರ್ಯಕ್ರಮ ನಕಲು ಮಾಡಲು ಹೊರಟಿದ್ದಾರೆ. ಜಗತ್ತಿನ ಜನ ಭಾರತವನ್ನು ಗೌರವಿಸುತ್ತಿದ್ದಾರೆ. ಕಾರಣ ನರೇಂದ್ರ ಮೋದಿಯವರ ಪರಿವರ್ತನೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಮಲ ಅರಳಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನಿರ್ನಾಮವಾಗಿ ಅರಬ್ಬಿ ಸಮುದ್ರದಲ್ಲಿ ಬಿದ್ದು ಹೋಗತ್ತೆ ಎಂದು ವ್ಯಂಗ್ಯವಾಡಿದರು.
ಪಂಚಾಯತ್‌ನಿಂದ ಪಾರ್ಲಿಮೆಂಟ್ವರೆಗೂ ಬಿಜೆಪಿ : ಇದಕ್ಕೂ ಮುನ್ನ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಯಡಿಯೂರಪ್ಪ ಅವರು 2008ರಲ್ಲಿ ಮುಖ್ಯಮಂತ್ರಿಯಾದ ಬಳಿಕ ಬಡವರ, ರೈತರ, ಹೆಣ್ಣುಮಕ್ಕಳ ಹಾಗೂ ಮಹಿಳೆಯರಿಗೆ ಸಹಾಯವಾಗುವ ಯೋಜನೆಗಳನ್ನು ಜಾರಿಗೆ ತಂದ ಮೊದಲ ಮುಖ್ಯಮಂತ್ರಿಯಾಗಿದ್ದಾರೆ.
ಪಂಚಾಯತ್‌ನಿಂದ ಪಾರ್ಲಿಮೆಂಟ್ವರೆಗೂ ಇಂದು ಬಿಜೆಪಿ ಇದೆ. ಇಂದು ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದೆ. ದೇಶದ ಹೆಚ್ಚಿನ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಿದರು.