ಚಾಮರಾಜನಗರ: ಪುನೀತ್ ರಾಜ್ಕುಮಾರ್ ನಿಧನದ ಹಿನ್ನೆಲೆಯಲ್ಲಿ ತಾಲೂಕಿನ ನಲ್ಲೂರುಮೋಳೆ ಗ್ರಾಮಸ್ಥರೆಲ್ಲರೂ ಸೇರಿ ಪುಣ್ಯಸ್ಮರಣೆ ಆಚರಿಸಿದರು.
ನಲ್ಲೂರುಮೋಳೆ ಗ್ರಾಮದಲ್ಲಿರುವ ಅಪ್ಪು ಅಭಿಮಾನಿಗಳು ಇಡೀ ಊರಿಗೆ ಡಂಗೂರ ಸಾರಿ 'ಯಾರೂ ಕೂಲಿ ಕೆಲಸಕ್ಕೆ ಹೋಗದೆ, ಅಪ್ಪು ಪುಣ್ಯಸ್ಮರಣೆಯಲ್ಲಿ ಭಾಗಿಯಾಗಬೇಕು' ಎಂದು ನಿನ್ನೆ ರಾತ್ರಿ ಕೋರಿಕೊಂಡಿದ್ದಾರೆ. ಅದರಂತೆ ಇಂದು ಮಕ್ಕಳು, ಮಹಿಳೆಯರಾದಿಯಾಗಿ ಪುನೀತ್ ಕಟೌಟಿಗೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಸಮರ್ಪಿಸಿದರು. ಜೊತೆಗೆ, ಅಭಿಮಾನಿಗಳು ತಮ್ಮ ಹಣದಿಂದಲೇ ಇಡೀ ಗ್ರಾಮಕ್ಕೆ ಊಟ ಹಾಕಿಸಿ ಅಗಲಿದ ನಟನಿಗೆ ಗೌರವ ಸಲ್ಲಿಸಿದರು.
'ನಮ್ಮ ಗ್ರಾಮದಲ್ಲಿ ರಾಜ್ಕುಮಾರ್, ಅಪ್ಪು ಅವರ ಅಭಿಮಾನಿಗಳೇ ಹೆಚ್ಚು. ಯುವಕರು ಪುಣ್ಯಸ್ಮರಣೆ ಮಾಡುವುದಾಗಿ ಹೇಳಿದ್ದರಿಂದ ನಾವೆಲ್ಲರೂ ಸಾಥ್ ನೀಡಿದ್ದೇವೆ. ನಮ್ಮ ಊರಿನಲ್ಲಿ ಯಾರೂ ಇಂದು ಕೂಲಿಗೆ ಹೋಗದೇ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ವಾರದಲ್ಲಿ ಗ್ರಾಮಸ್ಥರೆಲ್ಲರೂ ಅಪ್ಪು ಸಮಾಧಿ ಸ್ಥಳಕ್ಕೆ ತೆರಳಿ ಪ್ರಾರ್ಥಿಸಲಿದ್ದೇವೆ' ಎಂದು ಗ್ರಾಮಸ್ಥ ಸುಂದರ್ ತಿಳಿಸಿದರು.
ಗ್ರಾಮದಲ್ಲಿರುವ ನೂರಾರು ಅಪ್ಪು ಅಭಿಮಾನಿಗಳು ಹಣ ಸಂಗ್ರಹಿಸಿ, ಬಾಣಸಿಗರಿಂದ ಸಿಹಿ ಊಟದ ವ್ಯವಸ್ಥೆ ಕಲ್ಪಿಸಿದ್ದರು. ಕಲ್ಲೇಹುಳಿ, ಅನ್ನ, ಸಾರು, ಕೋಸಂಬರಿ, ಹಪ್ಪಳ, ಜಹಾಂಗೀರ್, ಕೀರು, ಪಲಾವ್ ಊಟವನ್ನು ಗ್ರಾಮಸ್ಥರಿಗೆ ಹಾಕಿಸಿದರು.
ಜಿಲ್ಲೆಯ ವಿವಿಧೆಡೆ ಕಾರ್ಯಕ್ರಮ:
ಅಪ್ಪು ಪುಣ್ಯಸ್ಮರಣೆ ಅಂಗವಾಗಿ ಜಿಲ್ಲೆಯ ವಿವಿಧೆಡೆ ಶ್ರದ್ಧಾಂಜಲಿ, ಗೀತ ನಮನ ಕಾರ್ಯಕ್ರಮವೂ ನಡೆದಿದೆ. ಚಾಮರಾಜನಗರದ ಸೋಮವಾರಪೇಟೆ ಬಡಾವಣೆಯಲ್ಲಿ ಅಪ್ಪು ಅಭಿಮಾನಿಗಳು ಇಂದು ಸಂಜೆ ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆ ನಡೆಸಿದ್ದಾರೆ. ವಿಶೇಷವೆಂದರೆ, ಹೆಚ್ಚು ಹೋಟೆಲ್ ಕಾರ್ಮಿಕರೇ ಇರುವ ಈ ಸಂಘದಲ್ಲಿ ಅಪ್ಪು ಅಭಿಮಾನಿ ಮಹೇಶ್ ನೇತೃತ್ವದಲ್ಲಿ ನೂರಾರು ಮಂದಿಗೆ ರಾತ್ರಿ ಭೋಜನ ವಿತರಿಸಿದ್ದಾರೆ.
ಇದನ್ನೂ ಓದಿ: ಪುನೀತ್ 11ನೇ ದಿನದ ಪುಣ್ಯಸ್ಮರಣೆ: ಸಿನಿತಾರೆಯರು, ರಾಜಕಾರಣಿಗಳು ಭಾಗಿ