ಚಾಮರಾಜನಗರ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಚಾಮರಾಜನಗರಕ್ಕೆ ಭೇಟಿ ನೀಡಲಿದ್ದಾರೆ. ಸಿಎಂ ಆದವರು ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂಬ ಮೌಢ್ಯವನ್ನು ಮುರಿಯಲು ಮತ್ತೆ ಮುಂದಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಬುಧವಾರ ಚಾಮರಾಜನಗರಕ್ಕೆ ಆಗಮಿಸಲಿದ್ದು, ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಚಾಮರಾಜನಗರ ಜಿಲ್ಲೆಯ ಕೆಡಿಪಿ ಸಭೆ ಕೂಡ ನಡೆಯಲಿದೆ.
ಮೊದಲ ಅವಧಿಯಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದ ಸಿಎಂ, ವಿದ್ಯಾರ್ಥಿಗಳ ಹಾಸ್ಟೆಲ್, ಗೋದಾಮುಗಳು, ಆರ್ಟಿಒ ಕಟ್ಟಡ ನಿರ್ಮಾಣ ಸೇರಿದಂತೆ ಹತ್ತಾರು ಯೋಜನೆಗಳಿಗೆ ನೂರಾರು ಕೋಟಿ ರೂ. ಅನುದಾನ ನೀಡಿದ್ದರು. ಇದೀಗ ಮತ್ತೆ ಭೇಟಿ ನೀಡುತ್ತಿದ್ದು, ಚಾಮರಾಜನಗರದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.
ಮೌಢ್ಯಕ್ಕೆ ಸೆಡ್ಡು ಹೊಡೆದ ಸಿಎಂ ಸಿದ್ದರಾಮಯ್ಯ : ಮೊದಲ ಅವಧಿಯಲ್ಲಿ ಸಿಎಂ ಆಗಿದ್ದ ಸಂದರ್ಭ ಸಿಎಂ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಭೇಟಿ ನೀಡಿ ಮೌಢ್ಯಕ್ಕೆ ಸೆಡ್ಡು ಹೊಡೆದಿದ್ದರು. ಬಳಿಕ ಐದು ವರ್ಷಗಳ ಕಾಲ ಆಡಳಿತ ನಡೆಸಿದ್ದರು.
ಸಾಮೂಹಿಕ ವಿವಾಹದಲ್ಲಿ ಭಾಗಿ : ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಸಾಮೂಹಿಕ ವಿವಾಹದಲ್ಲಿ ಬುಧವಾರ ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಬಳಿಕ ಅಲ್ಲಿಂದ ಹೊರಟು ಪ್ರಾಧಿಕಾರದ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಚಾಮರಾಜನಗರಕ್ಕೆ ಭೇಟಿ ಕೊಡಲಿದ್ದು, ಕುರುಬ ಸಮುದಾಯದ ಕನಕ ಭವನ ವಾಣಿಜ್ಯ ಸಂಕೀರ್ಣದ ಗುದ್ದಲಿ ಪೂಜೆ ನಡೆಸಲಿದ್ದಾರೆ. ನಂತರ ಚಾಮರಾಜನಗರ ಜಿಪಂ ಸಭಾಂಗಣದಲ್ಲಿ ನಡೆಯಲಿರುವ ಕೆಡಿಪಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದರ ಜೊತೆಗೆ ಸಿದ್ದರಾಮಯ್ಯ ಅವರ ರೈತರು ಭೇಟಿ ಮಾಡಿ ಅಹವಾಲುಗಳನ್ನು ಸಲ್ಲಿಸಲು ಮುಂದಾಗಿದ್ದಾರೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು, ಈಗಾಗಲೇ ಹಲವು ಜಿಲ್ಲೆಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಆದರೆ ಚಾಮರಾಜನಗರದಲ್ಲಿ ಈ ಬಾರಿ ಮಳೆ ಸಂಪೂರ್ಣ ಕೈಕೊಟ್ಟಿದ್ದು, ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಚಾಮರಾಜನಗರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿಲ್ಲ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ಸಭೆ ನಡೆಸುತ್ತಿರುವುದರಿಂದ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ : CWRC ಸಮಿತಿಯೂ ತಮಿಳುನಾಡು ನೀರಿನ ಬೇಡಿಕೆಯನ್ನು ತಿರಸ್ಕಾರ ಮಾಡಿದ್ದು ನನಗೆ ಸಂತೋಷ ತಂದಿದೆ: ಡಿಸಿಎಂ ಡಿ ಕೆ ಶಿವಕುಮಾರ್