ಚಾಮರಾಜನಗರ: ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದ ಗಣಿ ಮಾಲೀಕನಿಂದ ಭೂ ವಿಜ್ಞಾನ ಹಾಗೂ ಗಣಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಒತ್ತುವರಿ ತೆರವುಗೊಳಿಸಿದರು.
ಚಾಮರಾಜನಗರ ತಾಲೂಕಿನ ಕಸಭಾ ಹೋಬಳಿಯ ಯಾಲಕ್ಕೂರು - ಹನಗಳ್ಳಿಯಲ್ಲಿ ಜಮೀರ್ ಅಹಮ್ಮದ್ ಎಂಬವರು ಸರ್ಕಾರಿ ಓಣಿಯನ್ನು ಒತ್ತುವರಿ ಮಾಡಿ ಅಕ್ರಮ ಗಣಿಗಾರಿಕೆ ನಡೆಸಿರುವ ಕುರಿತು ಸ್ಥಳೀಯರು ದೂರಿದ್ದ ಬಗ್ಗೆ ಸುದ್ದಿ ಮಾಡಿ ಅಧಿಕಾರಿಗಳ ಗಮನ ಸೆಳೆದಿತ್ತು.
ಸುದ್ದಿಯ ಮಾಹಿತಿ ಪಡೆದು 16 ರಂದು ಗ್ರಾಪಂ ಸಿಬ್ಬಂದಿ, ದೂರುದಾರರ ಜೊತೆಗೆ ಗಣಿ ಇಲಾಖೆ ಉಪ ನಿರ್ದೇಶಕಿ ಲಕ್ಷ್ಮಮ್ಮ ಸ್ಥಳ ಪರಿಶೀಲನೆ ನಡೆಸಿ ದಂಡ ವಿಧಿಸಿ ಗಣಿಲೂಟಿಗೆ ಬಿಸಿ ಮುಟ್ಟಿಸಿದ್ದರು. ಮುಂದುವರೆದ ಕ್ರಮವಾಗಿ, ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಓಣಿಯನ್ನು ತಹಶೀಲ್ದಾರ್ ಸಮಕ್ಷಮದಲ್ಲಿ ಇಂದು ಒತ್ತುವರಿ ತೆರವುಗೊಳಿಸಿದ್ದಾರೆ. ಒತ್ತುವರಿ ಜಾಗವನ್ನು ಇನ್ನೊಂದು ವಾರದಲ್ಲಿ ಸಂಪೂರ್ಣ ತೆರವುಗೊಳಿಸಲಾಗುವುದು ಎಂದು ಡಿಡಿ ಲಕ್ಷ್ಮಮ್ಮ ತಿಳಿಸಿದ್ದು ಒತ್ತುವರಿ ಕಾರ್ಯ ಸಂಪೂರ್ಣ ತೆರವುಗೊಳಿಸಿದ ಬಳಿಕ ಗಣಿ ಮಾಲೀಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.