ಚಾಮರಾಜನಗರ: ನಾಯಿಗಳ ದಾಳಿಗೊಳಗಾಗಿ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಜಿಂಕೆಯೊಂದನ್ನು ಚಿಣ್ಣರು ರಕ್ಷಿಸಿದ್ದಾರೆ. ಅಲ್ಲದೆ, ಪ್ರಥಮ ಚಿಕಿತ್ಸೆ ನೀಡಿ ಹಿರಿಯರಿಗೆ ಮಾಹಿತಿ ತಿಳಿಸಿದ ಘಟನೆ ಹನೂರು ತಾಲೂಕಿನ ಶಾಗ್ಯ ಬಳಿಯ ಬಿರೋಟದಲ್ಲಿ ನಡೆದಿದೆ.
8-13 ವರ್ಷದ ಮಕ್ಕಳು ಆಟವಾಡುತ್ತಿರುವ ವೇಳೆ ನಾಯಿಯ ಹಿಂಡು ಜಿಂಕೆಯ ಮೇಲೆ ದಾಳಿಯಿಟ್ಟು ಕಚ್ಚಾಟ ನಡೆಸಿದ್ದನ್ನು ಕಂಡು ಕೂಡಲೇ, ಸಮಯ ಪ್ರಜ್ಞೆಯಿಂದ ಕಲ್ಲು, ದೊಣ್ಣೆಗಳಿಂದ ನಾಯಿ ಹಿಂಡನ್ನು ಓಡಿಸಿ ಜಿಂಕೆಯನ್ನು ಉಪಚರಿಸಿದ್ದಾರೆ ಈ ಮಕ್ಕಳು.
ಕೆಲವು ಹಸಿಸೊಪ್ಪುಗಳನ್ನು ಕಿತ್ತು ತಂದು ಪ್ರಥಮ ಚಿಕಿತ್ಸೆಯನ್ನು ನೀಡಿರುವ ಚಿಣ್ಣರು, ಜಿಂಕೆಗೆ ನೀರು ಕುಡಿಸಿ, ಹಿರಿಯರು ಬರುವ ತನಕ ಜಿಂಕೆಯ ಮೈದಡವಿ ಪ್ರಾಣಿ ವಾತ್ಸಲ್ಯ ಮೆರೆದಿದ್ದಾರೆ.
ಅರುಣ್ ಕುಮಾರ್, ಚೇತನ್, ಭವಾನಿ, ವೀರೇಂದ್ರ, ಚಂದು, ಪ್ರಿಯಾಂಕ, ರಮ್ಯಾ, ಮನೋಜ್, ಮಲ್ಲೇಶ, ಮಾನಸ, ಪ್ರೀತಂ ಹಾಗೂ ಲೋಕೇಶ್ ಎಂಬುವರು ಈ ಒಳ್ಳೆಯ ಕಾರ್ಯ ಮಾಡಿರುವ ಚಿಣ್ಣರು. ಇವರ ಪ್ರಾಣಿ ಪ್ರೀತಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿರುವ ಹಿರಿಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಜಿಂಕೆಯನ್ನು ಕಾಡಿಗೆ ಬಿಡುವ ವ್ಯವಸ್ಥೆ ಮಾಡಿದ್ದಾರೆ.
ಒಟ್ಟಿನಲ್ಲಿ ಮಕ್ಕಳ ಈ ಕಾರ್ಯ ಪರಿಸರ ರಕ್ಷಣೆ, ವನ್ಯ ಜೀವಿಗಳನ್ನು ಉಳಿಸುವ ನಿಟ್ಟಿನಲ್ಲಿ ಹಿರಿಯರಿಗೇ ಮಾದರಿಯಾಗಿದೆ.