ಚಾಮರಾಜನಗರ: ಹಸಿರು ವಲಯವಾದ ಚಾಮರಾಜನಗರದಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಿರುವುದರಿಂದ ಸೋಮವಾರದಿಂದ ಆರ್ಥಿಕ ಚಟುವಟಿಕೆಗಳು ಗರಿಗೆದರಲಿದ್ದು ಪ್ರಾಯೋಗಿಕವಾಗಿ ಹಲವು ವಾಣಿಜ್ಯ ಚಟುವಟಿಕೆಗಳಿಗೆ ಡಿಸಿ ಅವಕಾಶ ಮಾಡಿಕೊಟ್ಟಿದ್ದು, ನಿಷೇಧಾಜ್ಞೆ ಮುಂದುವರೆಸಿದ್ದಾರೆ.
ಈ ಕುರಿತು ಡಾ.ಎಂ.ಆರ್.ರವಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೋಮವಾರದಿಂದ ಜಿಲ್ಲಾದ್ಯಂತ ಜವಳಿ, ಆಭರಣದಂಗಡಿಗಳು ತೆರೆಯಲಿದ್ದು ಹೇರ್ ಸಲೂನ್ಗಳು ತೆರೆಯಲಿದೆ. ಕ್ಷೌರದಂಗಡಿಗಳು ಬೆಳಗ್ಗೆಯಿಂದ 12 ರ ವರೆಗೆ ಮಾತ್ರ ತೆರೆಯಲು ಅನುಮತಿ ನೀಡಲಾಗಿದ್ದು ಅವರ ಪರಿಕರಗಳನ್ನು ಪ್ರತಿ ಬಾರಿಯೂ ಸ್ಯಾನಿಟೇಷನ್ ಮಾಡಬೇಕು. ಜೊತೆಗೆ ಗ್ರಾಹಕರೇ ಮನೆಯಿಂದ ಟವೆಲ್ ತೆಗೆದುಕೊಂಡು ಹೋಗುವಂತೆ ಅರಿವು ಮೂಡಿಸಬೇಕೆಂದು ಸೂಚಿಸಿರುವುದಾಗಿ ತಿಳಿಸಿದರು.
ಜಿಲ್ಲೆಯ ಒಳಗೆ ಪ್ರಾಯೋಗಿಕವಾಗಿ 15 ಬಸ್ಗಳು ಸಂಚಾರ ನಡೆಸಲಿದ್ದು ಪಟ್ಟಣಗಳಲ್ಲಿ ಮಾತ್ರ ನಿಲ್ಲಿಸಲಿದೆ, 30 ಮಂದಿ ಮಾತ್ರ ಪ್ರಯಾಣಿಸಬೇಕಿದ್ದು ಕಿಟಕಿಯಿಂದ ಉಗುಳುವುದು, ಕಾಲು ಚಾಚಿಕೊಂಡು ಸೀಟಿನ ಮೇಲೆ ಮಲಗಲು ಅವಕಾಶವಿಲ್ಲ. ಇದರ ಕಣ್ಗಾವಲಿಗಾಗಿ 4 ಪ್ಲೇಯಿಂಗ್ ಸ್ಕ್ವಾಡ್ ಕಾರ್ಯಾಚರಣೆ ನಡೆಸಲಿದೆ ಎಂದರು.
ಪ್ರತಿ ಟ್ರಿಪ್ಪಿಗೂ ಸ್ಯಾನಿಟೇಷನ್ ಮಾಡಲು ಸೂಚಿಸಿದ್ದು ಪ್ರಯಾಣಿಕರು ಇಳಿದ ನಂತರ ಕಡ್ಡಾಯವಾಗಿ ಸ್ಕ್ರೀನಿಂಗ್ಗೆ ಒಳಪಡಬೇಕು ಬೇಕಾಬಿಟ್ಟಿಯಾಗಿ ಯಾರೂ ಕೂಡ ಇಳಿಯುವಂತಿಲ್ಲ- ಹತ್ತುವಂತಿಲ್ಲ, ಹಳ್ಳಿಗಳಲ್ಲಿ ಬಸ್ ನಿಲ್ಲಿಸುವುದಿಲ್ಲ, ಸ್ಟಾಂಡಿಂಗ್ ಪ್ರಯಾಣ ಮಾಡುವಂತಿಲ್ಲ ಎಂದರು.
ಇನ್ನು, ಸರ್ಕಾರದ ಆದೇಶದಂತೆ ಸೋಮವಾರದಿಂದ ವೈನ್ ಸ್ಟೋರ್ ಹಾಗೂ ಎಂಆರ್ಪಿ ಮದ್ಯ ದಂಗಡಿಗಳು ತೆರೆಯಲಿದ್ದು ಪ್ರತಿ ಅಂಗಡಿಗಳಲ್ಲೂ ಸಿಸಿಟಿವಿಯನ್ನು ಕಡ್ಡಾಯವಾಗಿ ಅಳವಡಿಸಬೇಕು. ಒಬ್ಬರು ಗರಿಷ್ಟ 750 ml ನಷ್ಟು ಮಾತ್ರ ಮದ್ಯ ಪಡೆಯಲು ಅವಕಾಶ ನೀಡಲಾಗಿದೆ. ಪೊಲೀಸರು ಕೂಡ ಜನ ದಟ್ಟನೆಯಾಗದಂತೆ ನೋಡಿಕೊಳ್ಳಲಿದ್ದಾರೆ. ಇದರ ಜೊತೆಗೆ, ವೈನ್ ಸ್ಟೋರ್ ಮಾಲೀಕರು ಕೂಡ ಖಾಸಗಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳಬೇಕೆಂದರು.