ಚಾಮರಾಜನಗರ: ಇದೇ ಮೊದಲ ಬಾರಿಗೆ ಹನೂರಿನಲ್ಲಿ ಆಯೋಜಿಸಿದ್ದ ಕಸಾಪ ಜಿಲ್ಲಾ ಸಾಹಿತ್ಯ ಸಮ್ಮೇಳನ ಸಂಪನ್ನಗೊಂಡಿತು.
ಸಮ್ಮೇಳನದ ಮುಕ್ತಾಯ ದಿನವಾದ ನಿನ್ನೆ ಚುನಾಯಿತ ಆಡಳಿತ ವ್ಯವಸ್ಥೆ ಇರುವ ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತದಲ್ಲಿ ಯಾವುದೇ ಬಾಹ್ಯ ಶಕ್ತಿಗಳ ಹಸ್ತಕ್ಷೇಪ ಮಾಡಕೂಡದು ಮತ್ತು ತಮಿಳಿನಲ್ಲಿರುವ ಮಲೆಮಹದೇಶ್ವರನ ಕುರಿತ ಜನಪದ ಸಾಹಿತ್ಯ ಸಂಪಾದನೆಗೊಂಡು ಕನ್ನಡಕ್ಕೆ ಅನುವಾದ ಆಗಬೇಕು ಎನ್ನುವ ಎರಡು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಮಾರೋಪ ಭಾಷಣ ಮಾಡಿದ ಮಾಜಿ ಸಂಸದ ಆರ್.ಧೃವನಾರಾಯಣ, ಹನೂರು ಭಾಗದಲ್ಲಿ ಸಮ್ಮೇಳನ ಹಮ್ಮಿಕೊಂಡಿರುವುದು ಸಂತಸದ ವಿಷಯ. ನಮ್ಮಂತಹ ರಾಜಕಾರಣಿಗಳು ಸಮ್ಮೇಳಗಳಲ್ಲಿ ಭಾಗವಹಿಸಿ ಇಲ್ಲಿ ಹಕ್ಕೊತ್ತಾಯಗಳನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಗತವಾಗುವಂತೆ ಮಾಡಬೇಕು. ಜಿಲ್ಲೆಯಲ್ಲಿ ಮೂಢನಂಬಿಕೆ ತಾಂಡವವಾಡುತ್ತಿದ್ದು, ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮುಂದಾಗಬೇಕು ಹಾಗೂ ರಾಜಕಾರಣಿಗಳು ಇಂತಹ ಸಾಹಿತ್ಯ ಪರಿಷತ್‍ಗಳ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಅಭಿಪ್ರಾಯಪಟ್ಟರು.