ಚಾಮರಾಜನಗರ: ರೈತರು ಬಾಳೆಗೊನೆ ಕೊಯ್ದು ನಂತರ ಬಾಳೆದಿಂಡು ಅನುಪಯುಕ್ತ ಎಂದು ಬಿಸಾಡುತ್ತಾರೆ. ಆದರೆ ಈ ಅನುಪಯುಕ್ತ ಬಾಳೆದಿಂಡಿನಿಂದ ಮ್ಯಾಟ್, ಫ್ಲೋರ್ ಮ್ಯಾಟ್, ಚಾಪೆ, ಬ್ಯಾಗ್, ಪರ್ಸ್ಗಳನ್ನು ತಯಾರಿಸಬಹುದು ಎಂಬುದನ್ನು ಚಾಮರಾಜನಗರದ ವರ್ಷಾ ಎಂಬ ಎಂ. ಟೆಕ್ ಪದವೀಧರೆ ತೋರಿಸಿಕೊಟ್ಟಿದ್ದಾರೆ.
ಮನ್ ಕಿ ಬಾತ್ ಪ್ರೇರಣೆ: ಮೂಲತಃ ಗುಂಡ್ಲುಪೇಟೆ ತಾಲೂಕಿನ ಆಲಹಳ್ಳಿಯ ವರ್ಷಾ ಎಂ.ಟೆಕ್ ಪದವೀಧರೆಯಾರೂ ಯಾವುದೇ ಉದ್ಯೋಗಕ್ಕೆ ಸೇರಿರಲಿಲ್ಲ. ಸ್ವಂತ ಉದ್ಯಮ ಪ್ರಾರಂಭಿಸಬೇಕು, ಕೈಲಾದಷ್ಟು ಮಂದಿಗೆ ಉದ್ಯೋಗ ನೀಡಬೇಕು ಎಂಬ ಕನಸನ್ನು ವರ್ಷಾ ಹೊಂದಿದ್ದರು. ಹೀಗಿರುವಾಗ ಮನ್ ಕಿ ಬಾತ್ನಲ್ಲಿ ನರೇಂದ್ರ ಮೋದಿ ಅವರು ಬಾಳೆದಿಂಡಿನಿಂದ ವಿವಿಧ ವಸ್ತುಗಳನ್ನು ತಯಾರಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದರು. ಇದರಿಂದ ಪ್ರೇರಣೆ ಪಡೆದ ಅವರು ತಾವೇಕೆ ಪ್ರಯತ್ನಿಸಬಾರದು ಎಂದು ಮುಂದಡಿ ಇಟ್ಟರು.
ಯೂಟ್ಯೂಬ್ನಲ್ಲಿ ಸರ್ಚ್: ಬಾಳೆ ದಿಂಡಿನ ಉತ್ಪನ್ನಗಳ ಬಗ್ಗೆ ಯೂಟ್ಯೂಬ್ನಲ್ಲಿ ಸರ್ಚ್ ಮಾಡಿದಾಗ ತಮಿಳುನಾಡಿನ ಕೊಯಮತ್ತೂರಿನಲ್ಲಿ ಇದರಿಂದ ವಸ್ತುಗಳನ್ನು ತಯಾರು ಮಾಡುತ್ತಿರುವ ಬಗ್ಗೆ ತಿಳಿದುಕೊಂಡರು. ಬಳಿಕ ಕೊಯಮತ್ತೂರಿನಿಂದ 3 ಲಕ್ಷ ರೂಪಾಯಿಗೆ ಯಂತ್ರೋಪಕರಣಗಳನ್ನು ಖರೀದಿಸಿ, ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿರುವ ತಮ್ಮ ಜಮೀನಿನಲ್ಲಿ ಬಾಳೆ ದಿಂಡು ಉತ್ಪನ್ನಗಳ ತಯಾರಿಕಾ ಉದ್ಯಮ ಆರಂಭಿಸಿದ್ದಾರೆ.
ನಗರ ಪ್ರದೇಶಗಳಲ್ಲಿರುವ ಆರ್ಗ್ಯಾನಿಕ್ ಶಾಪ್, ಗೂಗಲ್, ಫ್ಲಿಪ್‌ಕಾರ್ಟ್, ಅಮೇಜಾನ್ ಮೂಲಕ ಮಾರುಕಟ್ಟೆ ಸೃಷ್ಟಿಸಿಕೊಳ್ಳಲು ಮುಂದಾಗಿದ್ದಾರೆ. ಬಾಳೆ ದಿಂಡಿನಲ್ಲಿರುವ ರಸದಲ್ಲಿ ಪೋಟ್ಯಾಷಿಯಂ ಅಂಶ ಇರುವುದರಿಂದ ಅದನ್ನು ಬಿಸಾಡದೆ, ರಾಸಾಯನಿಕ ಗೊಬ್ಬರದ ಬದಲು ಅದರ ವೇಸ್ಟ್ನಿಂದ ಸಾವಯವ ಗೊಬ್ಬರ ತಯಾರಿಸಿ ಅದನ್ನೇ ತಮ್ಮ ಜಮೀನಿಗೆ ಬಳಸುತ್ತಿದ್ದಾರೆ.
ಪತ್ನಿ ಕಾರ್ಯಕ್ಕೆ ಪತಿ ಸಾಥ್: ಇವರು ತಯಾರಿಸುತ್ತಿರುವ ಬಾಳೆದಿಂಡಿನ ಚಾಪೆಗಳನ್ನು ಕೊಯಮತ್ತೂರಿನ ಕಂಪನಿಯೊಂದು ಖರೀದಿಸುತ್ತಿದೆ. ಬಾಳೆದಿಂಡಿನಿಂದ ತಯಾರಿಸಲಾದ ವಸ್ತುಗಳು ಪರಿಸರಸ್ನೇಹಿ ಆಗಿರುವುದರಿಂದ ಬೇಡಿಕೆ ಹೆಚ್ಚಾಗಬಹುದು ಎಂಬ ಆಶಯವನ್ನೂ ಇವರು ಹೊಂದಿದ್ದಾರೆ. ಮೈಸೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿ ಆಗಿರುವ ಪತಿ ಶ್ರೀಕಂಠಸ್ವಾಮಿ ಅವರು ರಜಾ ದಿನಗಳಲ್ಲಿ ಬಾಳೆ ದಿಂಡಿನ ಉತ್ಪನ್ನಗಳನ್ನು ತಯಾರಿಸುವ ಕೆಲಸದಲ್ಲಿ ನಿರತರಾಗಿ ತಮ್ಮ ಪತ್ನಿಯ ಕಾರ್ಯಕ್ಕೆ ಸಾಥ್ ನೀಡುತ್ತಿದ್ದಾರೆ.
ಇದನ್ನೂ ಓದಿ: ನಾರಿ ಶಕ್ತಿ ಸಾಬೀತುಪಡಿಸಿದ ಕಾಸರಗೋಡು ಯುವತಿ: ಬೈಕ್ನಲ್ಲಿ ದೇಶ-ವಿದೇಶ ಸುತ್ತಿ ಬಂದ್ರು ಅಮೃತಾ ಜೋಷಿ
ಈ ದಂಪತಿ ಸುತ್ತಮುತ್ತಲಿನ ಜಮೀನುಗಳಲ್ಲಿ ಬಾಳೆ ಬೆಳೆಯುವ ರೈತರನ್ನು ಸಂಪರ್ಕಿಸಿ ಬಾಳೆ ದಿಂಡು ಬಿಸಾಡದೆ ತಮಗೆ ನೀಡುವಂತೆ ಕೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಒಂದು ಬಾಳೆ ದಿಂಡಿಗೆ ಇಂತಿಷ್ಟು ಹಣ ಕೊಟ್ಟು ಖರೀದಿಸಲು ಆಲೋಚಿಸಿದ್ದಾರೆ. ಇದರಿಂದ ಸುತ್ತಮುತ್ತಲಿನ ರೈತರಿಗೂ ಲಾಭವಾಗಲಿದೆ ಎಂಬುದು ಅವರ ಆಶಯವಾಗಿದೆ.