ಚಾಮರಾಜನಗರ : ಆಷಾಢ ಮಾಸದಲ್ಲಿ ನಡೆಯುವ ರಾಜ್ಯದ ಏಕೈಕ ಚಾಮರಾಜೇಶ್ವರ ರಥೋತ್ಸವ ಈ ಬಾರಿ ಜರುಗುವುದು ಬಹುತೇಕ ಖಚಿತ ಎಂಬಂತೆ ರಥ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ.
ಬೆಂಗಳೂರಿನ ಕಲಾಸಿಪಾಳ್ಯದ ಕುಶಲಕರ್ಮಿಯೊಬ್ಬರು ರಥ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದಾರೆ. ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ, ನಂಜನಗೂಡು ಶ್ರೀಕಂಠೇಶ್ವರ ದೇಗುಲದ ಆಗಮಿಕರಾದ ನಾಗಚಂದ್ರ ದೀಕ್ಷಿತ್ ರಥ ನಿರ್ಮಾಣ ಸ್ಥಳಕ್ಕೆ ತೆರಳಿ ಕಾಮಗಾರಿ ಪರಿಶೀಲನೆ ನಡೆಸಿದ್ದಾರೆ.
ಓದಿ: ಚಾಮರಾಜೇಶ್ವರ ರಥ ನಿರ್ಮಾಣಕ್ಕಾಗಿ ಕಂಬಳಿ ಹಾಸಿ ವಾಟಾಳ್ ಧರಣಿ...
ಮುಂದಿನ ವರ್ಷ ಜುಲೈ ತಿಂಗಳೊಳಗೆ ಚಾಮರಾಜೇಶ್ವರ ರಥ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿ, ಜಾತ್ರೆ ನಡೆಸಲು ಅನುವು ಮಾಡಿಕೊಡಬೇಕು. ದೇವರನ್ನು ಕೂರಿಸುವ ಪೀಠವನ್ನು ಬನ್ನಿಮರ ಅಥವಾ ಹೊನ್ನೆಮರದಿಂದ ನಿರ್ಮಾಣ ಮಾಡುವಂತೆ ಸೂಚನೆ ನೀಡಿದ್ದಾರೆ.
ಕಿಡಿಗೇಡಿಯೋರ್ವ ರಥಕ್ಕೆ ಬೆಂಕಿ ಹಾಕಿದ್ದರಿಂದ ಚಾಮರಾಜೇಶ್ವರ ರಥೋತ್ಸವ ಹಲವಾರು ವರ್ಷಗಳಿಂದ ನಡೆಯುತ್ತಿಲ್ಲ. ಈಗ ರಥ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಮುಂದಿನ ಆಷಾಢದಲ್ಲಿ ರಥೋತ್ಸವ ನಡೆಯುವ ನಿರೀಕ್ಷೆ ಮೂಡಿದೆ.