ಚಾಮರಾಜನಗರ: ಅಷಾಢ ಮಾಸದಲ್ಲಿ ನಡೆಯುವ ರಾಜ್ಯದ ಏಕೈಕ ಚಾಮರಾಜೇಶ್ವರ ರಥೋತ್ಸವ ಮೂರನೇ ಬಾರಿಯೂ ನಿಂತಿದ್ದು, ನವಜೋಡಿಗಳು ಬೇಸರದಿಂದಲೇ ಕುಂಕುಮಾರ್ಚನೆ, ವಿಶೇಷ ಪೂಜೆಗಷ್ಟೆ ತೃಪ್ತಿಗೊಂಡರು.
ಹೌದು, 2007ರಲ್ಲಿ ಕಿಡಿಗೇಡಿಯೊಬ್ಬ ರಥಕ್ಕೆ ಬೆಂಕಿ ಇಟ್ಟಿದ್ದರಿಂದ ರಥೋತ್ಸವ ನಿಂತಿದ್ದು, ರಥ ನಿರ್ಮಾಣ ಕಾಮಗಾರಿ ಆರಂಭವಾಗದಿದ್ದರಿಂದ ದೇಗುಲದಲ್ಲಿ ವಿಶೇಷ ಪೂಜೆಗಳಷ್ಟೆ ನಡೆಯಿತು. ಶ್ರೀಚಾಮರಾಜೇಶ್ವರ ದೇವಸ್ಥಾನ ಕ್ರಿ.ಶ. 1826ರಲ್ಲಿ ನಿರ್ಮಾಣಗೊಂಡಿದ್ದು, ದೇವಸ್ಥಾನ ಪ್ರಾರಂಭೋತ್ಸವ ದಿನದಿಂದಲೇ ರಥೋತ್ಸವ ನಡೆಯುತ್ತಾ ಬಂದಿತ್ತು. ಆಷಾಢ ಮಾಸದಲ್ಲಿ ನೂತನ ದಂಪತಿಗಳು ತಮ್ಮ ತವರಿನಲ್ಲಿ ನೆಲೆಗೊಳ್ಳುವುದರಿಂದ ಜಾತ್ರೆ ದಿನದಂದು ನೂತನ ದಂಪತಿಗಳು ಭೇಟಿಯಾಗಿ, ದೇವರಿಗೆ ಹಣ್ಣು ಜವನ ಎಸೆಯುವುದರಿಂದ ಚಾಮರಾಜೇಶ್ವರ ರಥೋತ್ಸವವನ್ನು ನವಜೋಡಿಗಳ ಜಾತ್ರೆ ಎಂದೇ ಪ್ರಸಿದ್ಧಿಯಾಗಿದೆ.
ರಥೋತ್ಸವವಿಲ್ಲ ವಿಶೇಷ ಪೂಜೆಯಷ್ಟೆ:
ಈಟಿವಿ ಭಾರತದೊಂದಿಗೆ ದೇಗುಲದ ಅರ್ಚಕ ರಾಮಕೃಷ್ಣ ಭಾರದ್ವಾಜ್ ಮಾತನಾಡಿ, ಶತಮಾನಗಳಿಂದ ನಡೆದುಕೊಂಡು ಬಂದ ಜಾತ್ರೆ ಕಿಡಿಗೇಡಿ ಕೃತ್ಯದಿಂದ ಮೂರು ವರ್ಷಗಳಿಂದ ನಿಂತಿದೆ. ದೇಗುಲದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕ, ಹೂವಿನ ಅಲಂಕಾರ ನಡೆಯುತ್ತಿದ್ದು, ಮುಂದಿನ ಬಾರಿಯಾದರೂ ರಥೋತ್ಸವ ನಡೆಯಲಿ ಎಂಬುದೇ ಭಕ್ತಾಧಿಗಳ ಬೇಡಿಕೆ ಎಂದರು.
ಹಣ್ಣು - ಜವನ ಎಸೆಯದ ನವಜೋಡಿ: ಆಷಾಢ ಮಾಸ ಜಾತ್ರೆಯಲ್ಲಿ ಭೇಟಿಯಾಗುವ ನವಜೋಡಿಗಳು ತೇರಿಗೆ ಹಣ್ಣು ಜವನ ಎಸೆದರೇ ಸಂತಾನ ಭಾಗ್ಯ, ಇಷ್ಟಾರ್ಥ ಸಿದ್ಧಿಸಲಿದೆ ಎಂಬ ನಂಬಿಕೆ ಭಕ್ತರದ್ದಾಗಿದ್ದು, ಮುಂದಿನ ಬಾರಿಯಾದರೂ ತೇರು ನಡೆಯಲಿ ಎಂದು ಸಿದ್ದರಾಜು - ದಿವ್ಯಾ ದಂಪತಿ ಕೋರಿಕೊಂಡರು.
ಇನ್ನು, ಸೋಮವಾರವಷ್ಟೆ ದೇಗುಲ ಧರ್ಮದರ್ಶಿಗಳ ಸಭೆಯಲ್ಲಿ ಡಿಸಿ ಬಿ.ಬಿ.ಕಾವೇರಿ ಮಾತನಾಡಿ, ಚಾಮರಾಜೇಶ್ವರ ದೇವಸ್ಥಾನದ ರಥವನ್ನ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿತ್ತು. ಆದರೆ, ಇಲಾಖೆಯವರು ಈ ಕೆಲಸವನ್ನ ಮಾಡಲು ಸಾಧ್ಯವಿಲ್ಲ ಎಂದಿದ್ದರಿಂದ ರಥ ನಿರ್ಮಾಣ ಕಾರ್ಯ ವಿಳಂಬವಾಗಿದೆ. ಹಾಗಾಗಿ ರಥ ನಿರ್ಮಾಣ ಕಾರ್ಯದ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಈಗಾಗಲೇ ಕೆಲಸ ಪ್ರಗತಿಯಲ್ಲಿದೆ ಮುಂದಿನ ವರ್ಷದ ರಥೋತ್ಸವದ ವೇಳೆಗೆ ಸಿದ್ದಪಡಿಸಲಾಗುವುದು ಎಂದು ಭರವಸೆಯನ್ನು ನೀಡಿದ್ದಾರೆ.