ಚಾಮರಾಜನಗರ : ಕೊರೊನಾ ಮುಕ್ತವಾಗಿರುವ ಚಾಮರಾಜನಗರದ ಗಿರಿಜನ ಹಾಡಿಗಳಿಗೆ ಮತ್ತೆ "ಕೊರೊನಾ ಮಾರಿ" ಎಂಟ್ರಿ ಕೊಡುತ್ತಿದೆ. ಜತೆಗೆ ಇದು ಎಂಟ್ರಿ ಕೊಟ್ಟ ಹಾಡಿಗಳಲ್ಲಿ ಲಸಿಕೆ ಅಭಿಯಾನ ಈಗ ವೇಗ ಪಡೆಯುತ್ತಿದೆ.
ಲಸಿಕೆ, ಕೊರೊನಾ ಪರೀಕ್ಷೆಗೆ ಹೆದರಿ ಓಡಿ ಹೋಗುತ್ತಿದ್ದ ಗಿರಿಜನರಿಗೆ ಜಾಗೃತಿ ಮೂಡಿಸಲು ಸೋಲಿಗ ಮುಖಂಡರು ಬೀದಿ ನಾಟಕದ ಪರಿಹಾರ ಕಂಡು ಕೊಂಡಿದ್ದು, "ಕೊರೊನಾ ಮಾರಿ" ಎಂಬ ನಾಟಕದ ಮೂಲಕ ಕೊರೊನಾ ಜಾಗೃತಿ, ಲಸಿಕೆ ಉಪಯೋಗಗಳನ್ನು ತಿಳಿ ಹೇಳಲಾಗುತ್ತಿದೆ.
ನಾಟಕದಲ್ಲಿ ಏನಿದೆ ?: ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಸೋಲಿಗ ಪುಷ್ಮಾಲೆ ಕಲಾ ಸಂಘ ಬೀದಿ ನಾಟಕವನ್ನು ಪ್ರಸ್ತುತ ಪಡಿಸುತ್ತಿದ್ದು, ಕಲಾವಿದ ಬಸವರಾಜು ಎಂಬುವರು 25 ನಿಮಿಷಗಳ ಈ ನಾಟಕ ಬರೆದು 'ಕೊರೊನಾ ಮಾರಿ' ಎಂದು ಹೆಸರಿಟ್ಟಿದ್ದಾರೆ. ಸೋಲಿಗ ಭಾಷೆಯಲ್ಲೇ ಈ ನಾಟಕವಿದ್ದು 10 ಪಾತ್ರಗಳಿವೆ.
ಹಾಡು, ನೃತ್ಯವೂ ಇದ್ದು ಕೊರೊನಾ ವೈರಸ್ ಬರುವ ಬಗೆ?, ಹೇಗೆ ಹರಡುತ್ತೆ?, ಮುನ್ನೆಚ್ಚರಿಕೆ ಕ್ರಮಗಳೇನು?, ಜತೆಗೆ ಕೋವಿಡ್ ಕೇರ್ ಸೆಂಟರ್ಗೆ ದಾಖಲಾಗುವುದರಿಂದ ಆಗುವ ಪ್ರಯೋಜನಗಳು, ಪರೀಕ್ಷೆ, ಲಸಿಕೆಯಿಂದಾಗುವ ಉಪಯೋಗಗಳ ಬಗ್ಗೆ ನಾಟಕದಲ್ಲಿ ಹೇಳಲಾಗಿದೆ.
ಸೋಲಿಗ ಪಾತ್ರವರ್ಗಗಳೇ ನಾಟಕದಲ್ಲಿ ಅಭಿನಯಿಸುವುದರಿಂದ ನಾಟಕವನ್ನು ಹಾಡಿ ಜನರು ನೋಡುತ್ತಿದ್ದು ಕೊರೊನಾ ವೈರಸ್ ಎಂಬುದು ದೇವರು, ದೆವ್ವದಿಂದ ಬಂದಿಲ್ಲ ಎಂಬುದನ್ನು ಮನದಟ್ಟು ಮಾಡಲಾಗುತ್ತಿದೆ.
ಧನಾತ್ಮಕ ಪರಿಣಾಮ : ಬೀದಿ ನಾಟಕದಿಂದ ಲಸಿಕೆ ಅಭಿಯಾನಕ್ಕೂ ವೇಗ ಸಿಕ್ಕಿದೆ. ಹನೂರು ತಾಲೂಕಿನ ಬಹುತೇಕ ಹಾಡಿಗಳಲ್ಲಿ ಜನರು ಸ್ವಯಂ ಪ್ರೇರಣೆಯಿಂದ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ನಾಟಕದಲ್ಲಿ ನಿತ್ಯ ಬದಲಾವಣೆ ಮಾಡಿಕೊಳ್ಳಲಿದ್ದು, ವೈರಸ್ ಪಾತ್ರಧಾರಿಯನ್ನು ವಿಶೇಷವಾಗಿ ಅಲಂಕರಿಸಿ ಜನರನ್ನು ಆಕರ್ಷಿಸಲಾಗುತ್ತಿದೆ. ಕಳೆದ 5 ರಿಂದ 9ಕ್ಕೂ ಹೆಚ್ಚು ಹಾಡಿಗಳಲ್ಲಿ ನಾಟಕ ಪ್ರಸ್ತುತ ಪಡಿಸಿದ್ದು, ಜಾಗೃತಿ ಧನಾತ್ಮಕ ಪರಿಣಾಮ ಬೀರುತ್ತಿದೆ ಎಂದು ಹನೂರಿನ ಸೋಲಿಗ ಮುಖಂಡ ಮುತ್ತಯ್ಯ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ ಭೀತಿ : ಸರಳವಾಗಿ ನೆರವೇರಿತು ತಾಯಿ ಶ್ರೀ ಚಾಮುಂಡೇಶ್ವರಿಯ ಉತ್ಸವ