ಚಾಮರಾಜನಗರ: ಕಳೆದ ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ನಗರದ ಜೆಎಸ್ಎಸ್ ಆಸ್ಪತ್ರೆಯ ಪಿಸಿಯೋಥೆರಪಿಸ್ಟ್ ಒಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಮಂಡ್ಯ ಜಿಲ್ಲೆಯ ಬೆಳಕವಾಡಿ ಬಳಿಯ ಕಾವೇರಿ ನದಿಯಲ್ಲಿ ಶವ ಪತ್ತೆಯಾಗಿದೆ. ಪಿಸಿಯೋಥೆರಪಿಸ್ಟ್ ನಾಗವೇಣಿ(32) ಮೃತ ದುರ್ದೈವಿ.
ಮೃತಳ ಪತಿ ಸ್ವಾಮಿ ನಾಯಕ ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಯಲ್ಲಿ ಕ್ಷಯರೋಗ ವಿಭಾಗದ ಸೂಪರ್ ವೈಸರ್ ಕೆಲಸ ನಿರ್ವಹಿಸುತ್ತಿದ್ದಾರೆ. ಗಂಡ ಮತ್ತು ಈತನ ತಂಗಿ ಭಾಗ್ಯಾ ಮೃತಳಿಗೆ ದಿನ ನಿತ್ಯ ಕಿರುಕುಳ ಕೊಡುತ್ತಿದ್ದರು ಎನ್ನಲಾಗಿದೆ.
ಯಳಂದೂರು ನಿವಾಸಿಯಾಗಿದ್ದ ನಾಗವೇಣಿ ಕಾಣೆಯಾಗಿದ್ದ ಬಗ್ಗೆ ಪೋಷಕರು ಯಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನಲ್ಲಿ ಪತಿ ಸ್ವಾಮಿನಾಯಕ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ನಾಗವೇಣಿ ಪಾಲಕರು ತಿಳಿಸಿದ್ದಾರೆ.
ಈ ಸಂಬಂಧ ಮಂಡ್ಯ ಜಿಲ್ಲೆಯ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲಿನ ಪಿಎಸ್ಐ ಅಶೋಕ್ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಪ್ರೇಮ ವಿವಾಹ: ಚಿಕ್ಕಪ್ಪನ ಜೊತೆ ಸೇರಿ ತಂಗಿಯ ಕೊಲೆಗೈದ ಸಹೋದರ