ಚಾಮರಾಜನಗರ: ಕೊರೊನಾ ಆರ್ಭಟದ ನಡುವೆಯೂ ಅನ್ಯ ಕಾರಣಗಳಿಂದ 4 ತಿಂಗಳಲ್ಲಿ 12ಕ್ಕೂ ಹೆಚ್ಚು ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಚಾಮರಾಜನಗರದ ಗಂಗಾಮತಸ್ಥರು ಹಾಗೂ ಕುರುಬ ಸಮುದಾಯದ ಜನ ದೇವರಿಗೆ ಮೊರೆ ಹೋಗಿದ್ದಾರೆ.
ಈ ಎರಡು ಬೀದಿಗಳಲ್ಲಿ 100 ಕ್ಕೂ ಹೆಚ್ಚು ಕುಟುಂಬಗಳಿದ್ದು 400-450 ಜನಸಂಖ್ಯೆ ಇದೆ. ಆದರೆ, ಕಳೆದ 4 ತಿಂಗಳಲ್ಲಿ ಗಂಗಾಮತಸ್ಥರ ಬೀದಿಯಲ್ಲಿ 7 ಮಂದಿ, ಕುರುಬರ ಬೀದಿಯಲ್ಲಿ 6ಕ್ಕೂ ಹೆಚ್ಚು ಮಂದಿ ನಿಧನರಾಗಿದ್ದಾರೆ. ಇವರಲ್ಲಿ, ಮಧ್ಯವಯಸ್ಕರ ಸಂಖ್ಯೆಯೇ ಅಧಿಕವಾಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಕೊರೊನಾ ಕಾಲಕ್ಕೂ ಮುನ್ನ ಅದ್ಧೂರಿಯಾಗಿ ಗಣೇಶೋತ್ಸವ, ಮಹದೇಶ್ವರನ ಹಬ್ಬ, ಭಜನೆ, ಮಾರಿ ಹಬ್ಬ, ಶನೇಶ್ವರನ ಪೂಜೆಯನ್ನು ಸಾಂಗವಾಗಿ ನೆರವೇರಿಸಿಕೊಂಡು ಬರಲಾಗುತ್ತಿತ್ತು. ಆದರೆ, ಕೊರೊನಾ ಕರಿಛಾಯೆಯಿಂದ ಎಲ್ಲಾ ಹಬ್ಬಗಳಿಗೂ ಬ್ರೇಕ್ ಬಿದ್ದಿತ್ತು. ಕಾಕತಾಳೀಯವಾಗಿ ಸಾಲು ಸಾಲು ನಿಧನ ಸಂಭವಿಸುತ್ತಿರುವುದರಿಂದ ದೇವರ ಮುನಿದಿರುವ ಆತಂಕ ಬೀದಿಯ ಮಹಿಳೆಯರಲ್ಲಿ ಬೇರೂರಿತ್ತು. ಹೀಗಾಗಿ ನಿಗೂಢ ಸಾವಿನಿಂದ ಪಾರು ಮಾಡುವಂತೆ ಜನ ದೇವರ ಮೊರೆ ಹೋಗಿದ್ದಾರೆ.
ಕಂಡಾಯ, ಗಂಗೆ ಪೂಜೆ
ದೇವರ ಮುನಿಸಿಕೊಂಡಿರಬಹುದೆಂಬ ಮಾತುಗಳು ಕೇಳಿಬರುತ್ತಿರುವುದರಿಂದ ಬೀದಿಯ ಮುಖಂಡರು ಸಭೆ ಸೇರಿ ಜನರಿಂದ ದೇಣಿಗೆ ಸಂಗ್ರಹಿಸಿ ನಿನ್ನೆ ಚಾಮರಾಜೇಶ್ವರನಿಗೆ ವಿಶೇಷ ಪೂಜೆ, ಗಂಗೆ ಪೂಜೆ ಹಾಗೂ ಕೂಡ್ಲೂರಿನಿಂದ ಕಂಡಾಯ ತಂದು ನಗರದಲ್ಲಿ ಮೆರವಣಿಗೆ ಮಾಡಿ ಸಾವುಗಳು ನಿಲ್ಲಲ್ಲಿ ಜೊತೆಗೆ ಕೊರೊನಾ ಮಾರಿ ತೊಲಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಹಬ್ಬದಂತೆ ಬೀದಿಯನ್ನೆಲ್ಲಾ ಸ್ವಚ್ಛಗೊಳಿಸಿ ಹಸಿರು ತೋರಣಗಳಿಂದ ಸಿಂಗರಿಸಿ ಬಾಲಕಿಯರಿಂದ ಗಂಗೆ ಪೂಜೆ ಮಾಡಿಸಿ, ದೇವರಿಗೆ ಬೇಡಿಕೊಂಡಿದ್ದಾರೆ.