ಚಾಮರಾಜನಗರ: ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಚಾಮರಾಜನಗರ ಜಿಲ್ಲಾಡಳಿತ ಆರೋಗ್ಯ ಸಮೀಕ್ಷೆಯನ್ನು ಮಾಡಲು ಮುಂದಾಗುತ್ತಿದೆ ಎಂದು ಡಿಸಿ ಡಾ.ಎಂ.ಆರ್.ರವಿ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು , 1000 ಕ್ಕೆ 14 ಮಂದಿಗೆ ತೀವ್ರ ಉಸಿರಾಟದ ಸಮಸ್ಯೆ ಇರುವವರಿಗೆ ಸೋಂಕು ಬರುವ ಸಾಧ್ಯತೆ ಇರುವುದರಿಂದ 10 ವರ್ಷದೊಳಗಿನ ಮಕ್ಕಳು, 60 ವರ್ಷ ಮೇಲ್ಪಟ್ಟ ಜನರ ಆರೋಗ್ಯ ಸಮೀಕ್ಷೆಯನ್ನು 796 ಆಶಾ ಕಾರ್ಯಕರ್ತೆಯರು, 1621 ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮೂರು ದಿನದಲ್ಲಿ ಜಿಲ್ಲಾದ್ಯಂತ ನಡೆಸಲಾಗುವುದು ಎಂದು ತಿಳಿಸಿದರು.
ಇನ್ನು, ಕ್ವಾರಂಟೈನ್ ನಲ್ಲಿ ಇದ್ದ 208 ಜನರ ವರದಿಯಲ್ಲಿ ನೆಗೆಟಿವ್ ಬಂದಿದೆ. ತಬ್ಲಿಘಿ ಜಮಾತ್ ಧರ್ಮಸಭೆಯಲ್ಲಿ ಭಾಗವಹಿಸಿದ್ದ 103, ವಿದೇಶದಿಂದ ಬಂದವರು 43, ಜುಬಿಲಂಟ್ ನ 52, 10 ಮಂದಿ ವಲಸಿಗರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು ಎಂದು ಅವರು ಮಾಹಿತಿ ನೀಡಿದರು.
ಜಿಲ್ಲೆಯಿಂದ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರಕ್ಕೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದ್ದ ಎಲ್ಲಾ ವರದಿಯಲ್ಲೂ ನೆಗೆಟಿವ್ ಬಂದಿದ್ದು, ಓರ್ವನನ್ನು ಹೊರತುಪಡಿಸಿ ಕ್ವಾರೆಂಟೈನ್ ಕೇಂದ್ರದಲ್ಲಿದ್ದ ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ, ಜುಬಿಲಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಚಾಮರಾಜನಗರ ಜಿಲ್ಲೆಯ 52 ವ್ಯಕ್ತಿಗಳು 14 ದಿನಗಳ ಕ್ವಾರೆಂಟೈನ್ ಅವಧಿಯನ್ನು ಪೂರ್ಣಗೊಳಿಸಿ ಮನೆಯಲ್ಲಿದ್ದಾರೆ ಎಂದು ತಿಳಿಸಿದರು.