ಚಾಮರಾಜನಗರ : ಬೈಕ್ಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಎಳೆಪಿಳ್ಳಾರಿ ದೇವಾಲಯದ ಬಳಿ ಸಂಭವಿಸಿದೆ. ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ಮನು(24) ಹಾಗೂ ಚಾಮರಾಜನಗರ ಗಾಳಿಪುರ ನಿವಾಸಿ ರಾಜು(24) ಎಂಬುವರು ಮೃತರು. ಶಾಂತರಾಜು ಎಂಬುವರು ಗಾಯಗೊಂಡು ಚಾಮರಾಜನಗರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಾಜು ಕೊಳ್ಳೇಗಾಲದಿಂದ ಚಾಮರಾಜನಗರ ಕಡೆಗೆ ಹಾಗೂ ಮನು ಮತ್ತು ಶಾಂತರಾಜು ಕೊಳ್ಳೇಗಾಲ ಕಡೆಗೆ ತೆರಳುವಾಗ ಎಳೆಪಿಳ್ಳಾರಿ ದೇವಾಲಯದ ಬಳಿ ಅಪಘಾತ ಸಂಭವಿಸಿದೆ. ರಾಜು ಅತಿವೇಗವಾಗಿ ಬರುತ್ತಿದ್ದುದೇ ಅಪಘಾತಕ್ಕೆ ಕಾರಣ ಎನ್ನಲಾಗ್ತಿದೆ. ಈ ಸಂಬಂಧ ಮಾಂಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಣ ತರುವಂತೆ ಪತಿ ಕಿರುಕುಳಕ್ಕೆ ಪತ್ನಿ ಆತ್ಮಹತ್ಯೆ : ತವರು ಮನೆಯಿಂದ ಹಣ ತರುವಂತೆ ಪತಿ ನೀಡುತ್ತಿದ್ದ ಕಿರುಕುಳ ತಾಳಲಾರದೇ ಬೇಸತ್ತ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಹೇಶ್ ಎಂಬುವರ ಪತ್ನಿ ಜ್ಯೋತಿ(27) ಎಂಬುವರು ಮೃತ ಗೃಹಿಣಿ. ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಕೆಂಪಯ್ಯ ಎಂಬುವರ ಪುತ್ರಿ ಜ್ಯೋತಿಯನ್ನು 2014ರಲ್ಲಿ ಮಹೇಶ್ ಎಂಬುವರಿಗೆ ಮದುವೆ ಮಾಡಿಕೊಡಲಾಗಿತ್ತು.
ಅಡಕೆ ವ್ಯಾಪಾರಿಯಾಗಿದ್ದ ಮಹೇಶ್ ಆರ್ಥಿಕ ನಷ್ಟ ಅನುಭವಿಸಿದ್ದರಿಂದ ಹೆಂಡತಿಗೆ ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದ ಎನ್ನಲಾಗ್ತಿದೆ. ಈ ಸಂಬಂಧ ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಜಿಎಸ್ಟಿ ಪ್ರಧಾನ ಕಚೇರಿ ಕಟ್ಟಡದಿಂದ ಬಿದ್ದು ಆಫೀಸ್ ಬಾಯ್ ಆತ್ಮಹತ್ಯೆ