ಚಾಮರಾಜನಗರ: ಸಂವಿಧಾನ ದಿನ ನ.26ರಂದು ಮಂತ್ರ ಮಾಂಗಲ್ಯದ ಮೂಲಕ ಚಾಮರಾಜನಗರ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದಾ ನವ ಜೀವನಕ್ಕೆ ಕಾಲಿಡಲಿದ್ದಾರೆ. ಹೌದು, ಮದುವೆ ಎಂದರೆ ಅದ್ಧೂರಿತನ ಪ್ರದರ್ಶನ, ವಿಜೃಂಭಣೆಯೇ ಆಗಿರುವ ಈ ಕಾಲದಲ್ಲಿ ಸರಳವಾಗಿ, ವೈಚಾರಿಕವಾಗಿ ಉನ್ನತ ಅಧಿಕಾರಿಯೊಬ್ಬರು ನವ ಜೀವನಕ್ಕೆ ಕಾಲಿಡುವ ಮೂಲಕ ಇತರರಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.
ಚಾಮರಾಜನಗರದ ಹೆಚ್ಚುವರಿ ಜಿಲ್ಲಾಧಿಕಾರಿ ಆಗಿರುವ ಗೀತಾ ಹುಡೇದಾ ಅವರು ಹರೀಶ್ ಕುಮಾರ್ ಜೊತೆ ಮೈಸೂರಿನಲ್ಲಿ ಮಂತ್ರ ಮಾಂಗಲ್ಯದ ಮೂಲಕ ನವಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರ ವಿವಾಹ ಆಮಂತ್ರಣದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಕುವೆಂಪು ಚಿತ್ರಗಳನ್ನು ಹಾಕಿಸಿ ವೈಚಾರಿಕತೆ ಮೆರೆದಿದ್ದಾರೆ.
ಲೇಖಕ ಕುಂವೀ ಭಾಗಿ: ಕನ್ನಡದ ಖ್ಯಾತ ಸಾಹಿತಿ, ಲೇಖಕ ಕುಂ.ವೀರಭದ್ರಪ್ಪ ಇವರ ವಿವಾಹದಲ್ಲಿ ಮಂತ್ರ ಮಾಂಗಲ್ಯವನ್ನು ಬೋಧನೆ ಮಾಡಲಿದ್ದು, ಗೀತಾ ಹಾಗೂ ಹರೀಶ್ ಅವರು ಸರಳವಾಗಿ ದಾಂಪತ್ಯಕ್ಕೆ ಕಾಲಿಡಲಿದ್ದಾರೆ. ಈ ಕುರಿತು, ಎಡಿಸಿ ಗೀತಾ ಹುಡೇದಾ ಪ್ರತಿಕ್ರಿಯೆ ಕೊಟ್ಟಿದ್ದು, ಅನಗತ್ಯದ ವೆಚ್ಚ ಬೇಡ, ಸರಳವಾಗಿ, ವೈಚಾರಿಕವಾಗಿ ಸಂವಿಧಾನದ ದಿನದಂದು ಮಂತ್ರಮಾಂಗಲ್ಯ ಮೂಲಕ ವಿವಾಹವಾಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಏನಿದು ಮಂತ್ರ ಮಾಂಗಲ್ಯ?: ಪುರೋಹಿತರಿಲ್ಲದೇ, ದುಂದು ವೆಚ್ಚ ಮಾಡದೇ, ವೈಚಾರಿಕವಾಗಿ ಸರಳವಾಗಿ ದಾಂಪತ್ಯಕ್ಕೆ ಕಾಲಿಡುವ ವಿವಾಹ ಪದ್ಧತಿಯನ್ನು ರಾಷ್ಟ್ರಕವಿ ಕುವೆಂಪು ಪ್ರಾರಂಭಿಸಿದರು.
ಮಂತ್ರ ಮಾಂಗಲ್ಯ ವಿವಾಹ ಸಂಹಿತೆ: ಕುವೆಂಪು ಅವರು ಮೊದಲು ರಚಿಸಿದ ಮಂತ್ರ ಮಾಂಗಲ್ಯ ಎಂಬ ಚಿಕ್ಕ ಪುಸ್ತಕದಲ್ಲಿ ಅವರು ದಿನವೂ ದೇವರ ಮನೆಯಲ್ಲಿ ಧ್ಯಾನಮಾಡುತ್ತಾ ಹೇಳುತ್ತಿದ್ದ ದೇವಿಸ್ತೋತ್ರಗಳನ್ನು ಮಾತ್ರ ಸೇರಿಸಿದ್ದರು. ನಂತರ ಈ ಮಂತ್ರಗಳನ್ನು ಸೇರಿಸಿರುವುದರಿಂದ ಸಾಂಪ್ರದಾಯಿಕ ಮದುವೆಯಂತಾಗಬಹುದು ಮತ್ತು ಸಾಮಾನ್ಯ ಜನರಿಗೆ ಇದು ಅರ್ಥವಾಗುವುದಿಲ್ಲ ಎಂಬುದನ್ನು ಮನಗಂಡ ತೇಜಸ್ವಿಯವರು ಇದನ್ನು ಕುವೆಂಪುರವರ ಗಮನಕ್ಕೆ ತರುತ್ತಾರೆ. ಮದುವೆಗೆ ಒಂದು ಸಾಂಸ್ಕೃತಿಕ ಅರ್ಥ ಬರಲೆಂದು ಸೇರಿಸಿದ್ದ ಶ್ಲೋಕಗಳಲ್ಲಿ ಇಡೀ ಮನುಕುಲದ ಶ್ರೇಯಸ್ಸನ್ನು ಕೋರುವ ಮಹೋನ್ನತ ಆಶಯಗಳಿರುವುದರಿಂದ ಶ್ಲೋಕಗಳ ಜೊತೆಗೆ ಅದರ ಸಾರಾಂಶವನ್ನು ಗದ್ಯ ರೂಪಕ್ಕೆ ಇಳಿಸಲು ತೇಜಸ್ವಿಯವರಿಗೆ ತಿಳಿಸುತ್ತಾರೆ.
ತೇಜಸ್ವಿಯವರು ರೈತಸಂಘದ ಮುಖಂಡ ಹಾಗೂ ಸ್ನೇಹಿತರಾದ ಎಂ.ಡಿ. ನಂಜುಂಡಸ್ವಾಮಿ ಅವರ ಜೊತೆ ಸೇರಿ ಗದ್ಯದ ರೂಪದಲ್ಲಿ ವಿವಾಹ ಸಂಹಿತೆಯೊಂದನ್ನು ಬರೆದು ಕುವೆಂಪು ಅವರ ಒಪ್ಪಿಗೆಯ ಮೇರೆಗೆ ಮಂತ್ರ ಮಾಂಗಲ್ಯದ ಪುಸ್ತಕಕ್ಕೆ ಸೇರಿಸುತ್ತಾರೆ. ಕನ್ನಡ ಗದ್ಯದಲ್ಲಿದ್ದ ಈ ಹೊಸ ವಿವಾಹ ಸಂಹಿತೆಯನ್ನು ಓದಿ ಉಪದೇಶಿಸುವುದು ಸಂಸ್ಕೃತ ಶ್ಲೋಕಗಳನ್ನು ಹೇಳುವುದಕ್ಕಿಂತ ಸುಲಭವಾದ್ದರಿಂದ ಆ ಮೇಲಿನ ಮಂತ್ರಮಾಂಗಲ್ಯ ಮದುವೆಗಳೆಲ್ಲಾ ಗದ್ಯರೂಪದ ವಿವಾಹ ಸಂಹಿತೆಯನ್ನು ಹೆಚ್ಚಾಗಿ ಉಪಯೋಗಿಸಲು ಆರಂಭಿಸಿದವು.
ಮಂತ್ರಮಾಂಗಲ್ಯದ ಸಂಹಿತೆ ಹೀಗಿದೆ:
1. ಈ ದಿನ ಇಲ್ಲಿ ಈ ರೀತಿ ಮದುವೆಯಾಗುವುದರ ಮೂಲಕ ನೀವು ನಿಮ್ಮ ಎಲ್ಲಾ ಮಾನಸಿಕ ಮತ್ತು ಆಧ್ಯಾತ್ಮಿಕ ಸಂಕೋಲೆ ಮತ್ತು ದಾಸ್ಯಗಳಿಂದ ವಿಮುಕ್ತರಾಗಿ ಸ್ವತಂತ್ರರಾಗುತ್ತಿದ್ದೀರಿ.
2. ನೀವು ಇನ್ನು ಈ ಭೂಮಂಡಲದ ಯಾವುದೇ ಜಾತಿ ಮತ್ತು ಜನಾಂಗಗಳಿಗಿಂತ ಮೇಲಾದವರಲ್ಲ.
3. ಹಾಗೆಯೇ ಯಾವುದೇ ಜಾತಿ ಮತ್ತು ಜನಾಂಗಗಳಿಗಿಂತ ಕೀಳಾದವರೂ ಅಲ್ಲ.
4. ನಿಮ್ಮನ್ನು ಇಂದು ಮನುಷ್ಯ ಸಮಾಜದ ಎಲ್ಲ ಕೃತಕ ಜಾತಿಗಳಿಂದ ಮುಕ್ತರನ್ನಾಗಿ ಮಾಡಿದ್ದೇವೆ.
5. ನಿಮ್ಮನ್ನು ಇಂದು ಎಲ್ಲಾ ಸಂಕಚಿತ ಮತಧರ್ಮಗಳಿಂದ ಮುಕ್ತರನ್ನಾಗಿ ಮಾಡಿದ್ದೇವೆ.
6. ನಿಮ್ಮನ್ನು ಎಲ್ಲ ಆಚಾರ ಸಂಪ್ರದಾಯಗಳಿಂದ ಮುಕ್ತರನ್ನಾಗಿ ಮಾಡಿದ್ದೇವೆ.
7. ನಿಮ್ಮನ್ನು ಎಲ್ಲಾ ಅಸತ್ಯ ಮತ್ತು ಮೂಢನಂಬಿಕೆಗಳಿಂದ ಮುಕ್ತರನ್ನಾಗಿ ಮಾಡಿದ್ದೇವೆ
8.ಮನುಷ್ಯನ ಜೀವಿತ ಕಾಲವೇ ಒಂದು ಸುಮುಹೂರ್ತ. ಇದರೊಳಗೆ ನೀನು ಬೇರೆ ಸುಮುಹೂರ್ತಗಳನ್ನೂ, ರಾಹುಕಾಲ, ಗುಳಿಕಕಾಲಗಳನ್ನೂ ನೋಡುವ ಅಗತ್ಯವಿಲ್ಲ. ಕಾಲವು ನಿರ್ಗುಣ.
9. ಎಂದೂ ಸಂಪಾದಿಸಲು, ಸೃಷ್ಟಿಸಲು, ಕೂಡಿಡಲು ಸಾಧ್ಯವೇ ಇಲ್ಲದ, ಮನುಷ್ಯನ ಜೀವಿತಕಾಲದ ಪ್ರತಿ ಕ್ಷಣವೂ ಅತ್ಯಮೂಲ್ಯ. ಯಾರು ಈ ಸತ್ಯವನ್ನು ಅರಿಯುತ್ತಾರೋ ಅವರು ತಮ್ಮ ಕರ್ತವ್ಯ ಮತ್ತು ನಡವಳಿಕೆಗಳಿಂದ ಕಾಲವನ್ನು ಒಳ್ಳೆಯ ಅಥವಾ ಕೆಟ್ಟ ಕಾಲವನ್ನಾಗಿ ಪರಿವರ್ತಿಸಬಲ್ಲರು.
10. ನೀವು ಯಾವುದೇ ಮನೆದೇವರು ಅಥವಾ ಕುಲದೇವರುಗಳ ಅಡಿಯಾಳಾಗಿ ಬದುಕಬೇಕಾಗಿಲ್ಲ. ಮನುಷ್ಯ ಸಮಾಜದ ಮಾನವೀಯ ಮೌಲ್ಯಗಳೇ ಮನುಷ್ಯನ ಮೊದಲನೆಯ ಹಾಗೂ ಕೊನೆಯ ದೇವರು.
11. ಮಾನವರೆಲ್ಲರೂ ಸಮಾನರು. ಪುರುಷನು ಸ್ತ್ರೀಗಿಂತ ಮೇಲು ಎಂದು ಹೇಳುವ ಎಲ್ಲ ಧರ್ಮಗಳನ್ನೂ, ಎಲ್ಲ ಸಂಪ್ರದಾಯಗಳನ್ನೂ ನೀವು ಇಂದು ತಿರಸ್ಕರಿಸಿದ್ದೀರಿ.
12. ಹೆಂಡತಿಯಾಗಲೀ, ಗಂಡನಾಗಲೀ ಪರಸ್ಪರ ಅಧೀನರೂ ಅಲ್ಲ, ಆಜ್ಞಾನುವರ್ತಿಯೂ ಅಲ್ಲ. ಹೆಂಡತಿಯೂ ಗಂಡನಷ್ಟೇ ಸ್ವತಂತ್ರಳೂ ಸಮಾನತೆಯುಳ್ಳವಳೂ ಆಗಿರುತ್ತಾಳೆ.
13. ಗಂಡ – ಹೆಂಡಿರನ್ನು ಒಟ್ಟಿಗೆ ಬದುಕುವಂತೆ ಮಾಡುವ ಸಾಧನ ಪ್ರೀತಿಯೊಂದೇ. ಒಬ್ಬರನ್ನೊಬ್ಬರು ಪ್ರೀತಿಸದವರು ತಾಳಿ ಕಟ್ಟಿಕೊಂಡರೂ ವ್ಯರ್ಥ, ಅಗ್ನಿಯನ್ನು ಸುತ್ತಿದರೂ ವ್ಯರ್ಥ, ಯಾವ ಯಾವ ಶಾಸ್ತ್ರಾಚಾರದ ಪ್ರಕಾರ ಮದುವೆಯಾದರೂ ವ್ಯರ್ಥ.
14. ದೇವರ ಬಗ್ಗೆ ಎಂದೂ ಸುಳ್ಳು ಹೇಳಕೂಡದು. ನಿಮ್ಮ ಅನುಭವ, ನಿಮಗೆ ದೇವರು ಇಲ್ಲವೆಂದು ತಿಳಿಸಿದರೆ ದೇವರು ಇಲ್ಲವೆಂದು ಹೇಳಿ.
15. ನಿಮ್ಮ ಅನುಭವ, ನಿಮಗೆ ದೇವರು ಇದ್ದಾನೆಂದು ತಿಳಿಸಿದರೆ ದೇವರು ಇದ್ದಾನೆಂದು ಹೇಳಿ.
16. ನಿಮ್ಮ ಅನುಭವ, ದೇವರು ಇದ್ದಾನೆಯೋ ಇಲ್ಲವೋ ತಿಳಿಯದೆಂದು ತಿಳಿಸಿದರೆ, ದೇವರು ಇದ್ದಾನೆಯೋ ಇಲ್ಲವೋ ತಿಳಿಯದೆಂದು ಹೇಳಿ.
17. ನಮ್ಮ ಅನುಭವವನ್ನು ಸುಳ್ಳು ಹೇಳದೆ ಒಪ್ಪಿಕೊಳ್ಳುವುದು, ನಿರ್ಭೀತಿಯಿಂದ ವಾಸ್ತವ ಸ್ಥಿತಿಯನ್ನು ನೋಡುವುದು ಸತ್ಯಾನ್ವೇಷಣೆಯ ಮೊದಲನೆಯ ಹಂತ. ಜ್ಞಾನ ಯೋಗದ ಮೊದಲ ಪಾಠ.
18. ಪರವಂಚನೆ ಮತ್ತು ಆತ್ಮವಂಚನೆ ಮಾಡಿಕೊಳ್ಳುವವನಿಗೆ ತಮಸ್ಸಿನಿಂದಲೂ, ಅಜ್ಞಾನದಿಂದಲೂ ವಿಮುಕ್ತಿಯೇ ಇಲ್ಲ.
ವರದಕ್ಷಿಣೆ ಅಥವಾ ವಧುದಕ್ಷಿಣೆ ವ್ಯವಹಾರಗಳಿಗೆ ಒಳಗಾಗದೆ, ನೀವು ನಿಮ್ಮ ಸ್ವಂತ ಪ್ರಯತ್ನದಿಂದ ನಿಮ್ಮ ತಂದೆ ತಾಯಿಗಳಿಗೆ ಯಾವ ರೀತಿಯ ಆರ್ಥಿಕ ಹೊರೆಯಾಗದಂತೆ ವಿವಾಹ ಮಾಡಿಕೊಳ್ಳುತ್ತಿದ್ದೀರಿ.
ಎಲ್ಲ ಮತಧರ್ಮ, ಕಂದಾಚಾರ, ಅಜ್ಞಾನಗಳಿಂದ ವಿಮುಕ್ತರಾಗಿರುವ ವಧು ವರರೇ, ಮಾನವ ಕೋಟಿಯನ್ನು ನಿಮ್ಮಂತೆಯೇ ವಿಮುಕ್ತರನ್ನಾಗಿ ಮಾಡುವ ಪವಿತ್ರ ಕರ್ತವ್ಯವನ್ನು ನೀವು ಮಾಡಿರಿ. ಇನ್ನು ನೀವು ಯಾವುದೇ ಧರ್ಮಕ್ಕೂ ಸೇರುವ ಅಗತ್ಯವಿಲ್ಲ. ಯಾವುದೇ ಮತಕ್ಕೂ ಸೇರುವ ಅಗತ್ಯವಿಲ್ಲ. ಯಾವುದೇ ಶಾಸ್ತ್ರಾಚಾರವನ್ನೂ ಅನುಸರಿಸಬೇಕಾದ ಅಗತ್ಯವಿಲ್ಲ. ಮೇಲೆ ಬೋಧಿಸಿರುವ ಪ್ರತಿಜ್ಞಾವಿಧಿಗಳೇ ನಿಮ್ಮ ಜೀವನದ ದಾರಿದೀಪವಾಗಲಿ. ಮೌಢ್ಯ, ಅಜ್ಞಾನ, ಅಂಧಕಾರಗಳ ವಿರುದ್ಧ ಭಾರತೀಯರಾದ ನಾವೆಲ್ಲ ಹೂಡಿರುವ ಈ ಮಹಾ ಹೋರಾಟದಲ್ಲಿ ನೀವೂ ಭಾಗಿಗಳಾಗಬೇಕೆಂದು ನಾವು ವಿನಂತಿಸಿಕೊಳ್ಳುತ್ತೇವೆ. ನೀವು ಇಲ್ಲಿ ಈ ದಿನದಿಂದ ದಂಪತಿಗಳೆಂದು ನಾವು ಘೋಷಿಸುತ್ತೇವೆ. ಹೀಗೆ, ಮಂತ್ರಮಾಂಗಲ್ಯದ ಸಂಹಿತೆ ಇದ್ದು ಇದನ್ನು ವಧು-ವರರು ಘೋಷಿಸಿಕೊಂಡು ನವ ಜೀವನಕ್ಕೆ ಕಾಲಿಡಲಿದ್ದಾರೆ.
ಇದನ್ನೂ ಓದಿ: ಹಾಸನ: ನವ ಜೀವನಕ್ಕೆ ಕಾಲಿಟ್ಟ ವಿಶೇಷಚೇತನ ಜೋಡಿ