ಚಾಮರಾಜನಗರ: ಕೇಂದ್ರ ಸರ್ಕಾರ ನೀಡಿರುವ ಮಧ್ಯಂತರ ನೆರೆ ಪರಿಹಾರ ಅಲ್ಪ ಮೊತ್ತವಾಗಿದ್ದು, ಕೇಂದ್ರ ಸರ್ಕಾರ ರಾಜ್ಯಕ್ಕೆ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ನಗರದಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟಿಸಿದವು.
ಚಾಮರಾಜೇಶ್ವರ ದೇಗುಲದಿಂದ ಚಾ.ರಂ. ಶ್ರೀನಿವಾಸಗೌಡ ನೇತೃತ್ವದಲ್ಲಿ ಮೆರವಣಿಗೆ ಮೂಲಕ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿ ರಸ್ತೆ ತಡೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಕೇಂದ್ರ ಸರ್ಕಾರ ಕರ್ನಾಟಕದ ಪಾಲಿಗೆ ಖಾಲಿ ಡಬ್ಬವಾಗಿದೆ ಎಂದು ಘೋಷಣೆ ಕೂಗುತ್ತಾ ರಸ್ತೆಯಲ್ಲಿ ಉರುಳು ಸೇವೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಿಡಿಕಾರಿದರು.
ಉತ್ತರ ಕರ್ನಾಟಕ ಪ್ರವಾಹದಿಂದ ತತ್ತರಿಸಿದ್ದು, ರಾಜ್ಯದ ಜನರ ತಾಳ್ಮೆ ಪರೀಕ್ಷಿಸದೇ ಸಮರ್ಪಕ ಪರಿಹಾರದ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ನಿರಂತರ ಪ್ರತಿಭಟನೆ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.