ಕೊಳ್ಳೇಗಾಲ(ಚಾಮರಾಜನಗರ): ಲಾಕ್ಡೌನ್ ವಿಸ್ತರಣೆ ಹಿನ್ನೆಲೆ ಕೇಂದ್ರ, ರಾಜ್ಯ ಸರ್ಕಾರ ಬಡವರಿಗೆ ನೆರವಾಗಬೇಕು ಎಂದು ಶಾಸಕ ಎನ್.ಮಹೇಶ್ ಒತ್ತಾಯಿಸಿದ್ದಾರೆ. ಕೊರೊನಾದಿಂದ ದೇಶಾದ್ಯಂತ ಲಾಕ್ಡೌನ್ ಇದ್ದು, ಇದೀಗ ಎರಡು ಬಾರಿ ಲಾಕ್ಡೌನ್ ವಿಸ್ತರಣೆಯಾಗಿದೆ. ಇದೇ ರೀತಿ ಮೇ 3ಕ್ಕೂ ಮುಂದುವರೆದರೆ ಬಡವರಿಗೆ ತೊಂದರೆಯಾಗುವುದು ಖಚಿತ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಡ ಕೂಲಿ ಕಾರ್ಮಿಕರಿಗೆ ನೆರವಾಗಬೇಕು ಎಂದಿದ್ದಾರೆ.
ಜನತಗೆ ಆಹಾರ ಭದ್ರತೆಯೂ ಮುಖ್ಯವಾಗಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಶ್ರಮಿಕ ವರ್ಗಕ್ಕೆ ನೆರವಾಗಬೇಕು ಎಂದ ಶಾಸಕರು, ಈ ಬಗ್ಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಕಳೆದ ಒಂದು ವಾರದಿಂದ 10 ಸಾವಿರಕ್ಕೂ ಹೆಚ್ಚು ಕಿಟ್ಗಳನ್ನು ವಿಧಾನಸಭಾ ಕ್ಷೇತ್ರದಾದ್ಯಂತ ಶ್ರಮಿಕ ವರ್ಗಕ್ಕೆ ನೀಡುತ್ತಾ ಬಂದಿದ್ದೇನೆ. ಇದರಲ್ಲಿ ನನಗೆ ತೃಪ್ತಿಯಿಲ್ಲ. ಸರ್ಕಾರದ ಮಟ್ಟದಲ್ಲೂ ಅವರಿಗೆ ಸಹಾಯ ಮಾಡಿಸುವುದು ನನ್ನ ಉದ್ದೇಶವಾಗಿದೆ ಎಂದಿದ್ದಾರೆ.
ಇದಕ್ಕೂ ಮುನ್ನ ಮಂಗಳಮುಖಿಯರು ಹಾಗೂ ರೋಗಿಗಳಿಗೆ ಕಿಟ್ ವಿತರಿಸಿ ಸಂಕಷ್ಟಕ್ಕೆ ನೆರವಾಗಿದ್ದಾರೆ.