ಚಾಮರಾಜನಗರ: ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ಅರಣ್ಯ ಇಲಾಖೆ ತೋಡಿದ್ದ ಗುಂಡಿಗೆ ಬಿದ್ದಿದ್ದ ಹಸುವೊಂದನ್ನು ಗ್ರಾಮಸ್ಥರು ರಕ್ಷಿಸಿದ್ದು, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಕಾಡಂಚಿನಲ್ಲಿ ರೈಲ್ವೆ ಕಂಬಿ ತಡೆಗೋಡೆ ನಿರ್ಮಿಸಲು ಕೌದಳ್ಳಿ ಅರಣ್ಯ ವಲಯದ ಅಧಿಕಾರಿಗಳು ಗುಂಡಿಗಳನ್ನು ತೋಡಿ 3-4 ತಿಂಗಳುಗಳೇ ಕಳೆದಿದೆ. ಗುಂಡಿಗಳನ್ನು ಹಾಗೇ ಬಿಟ್ಟಿರುವುದರಿಂದ ಮೇಯಲು ತೆರಳುವ ಜಾನುವಾರುಗಳು ಬಿದ್ದು ಗಾಯಗೊಳ್ಳುತ್ತಿವೆ ಮತ್ತು ಮೃತಪಡುತ್ತಿವೆ ಎಂದು ತಿಳಿದು ಬಂದಿದೆ.
ಈ ಕುರಿತು ಸಮಾಜ ಸೇವಕ ರಾಜು ಪ್ರತಿಕ್ರಿಯಿಸಿ, ಕೆಂಚೆಗೌಡ ಎಂಬುವವರ ಹಸುವೊಂದು ಸಂಜೆಯಾದರೂ ಮನೆಗೆ ಬರದಿದ್ದರಿಂದ ಹುಡುಕಾಡಿದಾಗ ಗುಂಡಿಗೆ ಬಿದ್ದು ಒದ್ದಾಡುತ್ತಿರುವುದನ್ನು ಕಂಡು ರಕ್ಷಿಸಿದೆವು. ಅವರದ್ದೇ 2 ಹಸು ಗುಂಡಿಗೆ ಬಿದ್ದು ಈಗಾಗಲೇ ಸತ್ತಿವೆ ಎಂದು ತಿಳಿಸಿದರು.
ಹಸುಗಳನ್ನೇ ನಂಬಿಕೊಂಡು ಸಾಕಷ್ಟು ರೈತ ಕುಟುಂಬಗಳು ಜೀವಿಸುತ್ತಿವೆ. ಅರಣ್ಯ ಇಲಾಖೆ ತೋಡಿರುವ ಗುಂಡಿಗಳ ಸುತ್ತ ಒಂದು ಮುಳ್ಳಿನ ಬೇಲಿಯಾದರೂ ಹಾಕಿ ಜಾನುವಾರುಗಳು ಗುಂಡಿಗೆ ಬೀಳದಂತೆ ಮಾಡಬೇಕಿದೆ. ಹಸುಗಳನ್ನು ಕಳೆದುಕೊಂಡಿರುವ ರೈತರಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.