ಚಾಮರಾಜನಗರ: ಬಿಎಸ್ಪಿ 2023ರಲ್ಲಿ ರಾಜ್ಯದಲ್ಲಿ ಪ್ರಬಲ ವಿರೋಧ ಪಕ್ಷವಾಗಿ, 2028ಕ್ಕೆ ಕರ್ನಾಟಕದಲ್ಲಿ ಸರ್ಕಾರ ನಡೆಸುತ್ತೇವೆಂದು ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಯುವ ಸಮುದಾಯ, ಎಲ್ಲಾ ಜಾತಿ-ಮತಗಳ ಮುಖಂಡರು ಬಿಎಸ್ಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಎಲ್ಲಾ ಸಮುದಾಯದ ಪಾರ್ಟಿಯಾಗಿ ಬಿಎಸ್ಪಿ ಬೆಳೆಯುತ್ತಿದೆ. 2023ಕ್ಕೆ ಪ್ರಬಲ ವಿಪಕ್ಷವಾಗಿ ವಿಧಾನಸೌಧದ ಹೊರಗೆ ಮತ್ತು ಒಳಗೆ ದಾಖಲೆ ಸಮೇತ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಬಣ್ಣ ಬಯಲು ಮಾಡುತ್ತೇವೆಂದು ಹೇಳಿದರು.
2024ರ ಲೋಕಸಭೆ ಚುನಾವಣೆಯಲ್ಲಿ ಯುಪಿಎ-2ರಂತೆ ಮೋದಿ ಸರ್ಕಾರ ಧೂಳಿಪಟವಾಗಲಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಹೊರತಾದ ಮೂರನೇ ಶಕ್ತಿ ದೇಶವನ್ನು ಮುನ್ನಡೆಸುವ ವಿಶ್ವಾಸ ನಮ್ಮದಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಅಧಿಕಾರ ಹಿಡಿಯಲು ಪಕ್ಷ ಮತ್ತಷ್ಟು ಸಬಲವಾಗುತ್ತಿದೆ. ಆ ದಿಸೆಯಲ್ಲೇ ನಾವು ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.
ಇದೇ ವೇಳೆ, ಗ್ರಾಪಂ ಚುನಾವಣೆಯೂ ಪಕ್ಷ ರಹಿತ ಎಂದು ಹೇಳಲಾಗುತ್ತಿದ್ದರೂ ಮೂರು ಪಕ್ಷಗಳು ರಾಜಕೀಯ ಮಾಡುತ್ತಿವೆ. ಪ್ರಚಾರ ನಡೆಸುತ್ತಿದ್ದಾರೆ, ಇದು ಮೊದಲು ನಿಲ್ಲಬೇಕು. ಕನಿಷ್ಠ ಪಕ್ಷ ಗ್ರಾಪಂ ಚುನಾವಣೆಯಾದರೂ ಪಕ್ಷ ರಹಿತವಾಗಿ ನಡೆಯಬೇಕು. ಚುನಾವಣಾ ಆಯೋಗ ಈ ವಿಚಾರದಲ್ಲಿ ಕಾರ್ಯೋನ್ಮುಖ ಆಗಬೇಕು ಎಂದು ಆಗ್ರಹಿಸಿದರು.