ಚಾಮರಾಜನಗರ: ಕೊರೊನಾ ಭೀತಿಯಿಂದ ರಕ್ತದಾನಿಗಳು ಆಸ್ಪತ್ರೆಗೆ ಮುಖ ಮಾಡದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿರುವ ರಕ್ತನಿಧಿ ಕೇಂದ್ರದಲ್ಲಿ ರಕ್ತದ ಕೊರತೆ ಉಲ್ಬಣವಾಗಿದೆ.
ಕೊರೊನಾ ಭೀತಿ ಹಾಗೂ ಲಸಿಕೆ ಪಡೆದ ನಂತರ 15 ದಿನಗಳವರೆಗೆ ರಕ್ತದಾನ ಮಾಡಬಾರದು ಎಂಬ ಮಾರ್ಗಸೂಚಿ ಇರುವುದರಿಂದ ನಿತ್ಯ ಸರಾಸರಿ 25 ರಿಂದ 28 ಯೂನಿಟ್ ರಕ್ತ ಬೇಡಿಕೆಯಲ್ಲಿದೆ. ಆದರೆ, 17-18 ಯೂನಿಟ್ ಅಷ್ಟೇ ಈಗ ಸಂಗ್ರಹವಾಗುತ್ತಿದ್ದು, ರೋಗಿಗಳ ಸಂಬಂಧಿಕರ ಪರದಾಟ ಸಾಮಾನ್ಯವಾಗಿದೆ.
2020 ಮಾರ್ಚ್ನಿಂದ 2021 ಏಪ್ರಿಲ್ವರೆಗೆ 3,469 ಯೂನಿಟ್ ರಕ್ತ ಸಂಗ್ರಹವಾಗಿದ್ದರೆ, 3,588 ಯೂನಿಟ್ ರಕ್ತ ನೀಡಲಾಗಿದೆ. ಕಳೆದ ಮೇನಲ್ಲಿ ಕೇವಲ 73 ಯೂನಿಟ್ ರಕ್ತ ಸಂಗ್ರಹವಾಗಿದ್ದು, 176 ಯೂನಿಟ್ ರಕ್ತ ಪೂರೈಕೆ ಮಾಡಿದ್ದಾರೆ. ಜೂನ್ನಲ್ಲಿ ಈ ಸಂಖ್ಯೆ ರಕ್ತ ಸಂಗ್ರಹ 234 ಯೂನಿಟ್ ಇದ್ದರೆ ಪೂರೈಕೆ ಇದಕ್ಕಿಂತ ಹೆಚ್ಚಿದ್ದು, ಇದೇ ರೀತಿ ಇಂದಿಗೂ ಮುಂದುವರಿದಿದೆ.
ಜಿಲ್ಲೆಯಲ್ಲಿ ಏಕೈಕ ಬ್ಲಡ್ ಬ್ಯಾಂಕ್ ಇದ್ದು, ಇಲ್ಲಿಂದ ಖಾಸಗಿ ಆಸ್ಪತ್ರೆಗಳು, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಪೂರೈಕೆ ಮಾಡಬೇಕಾದ ಅನಿವಾರ್ಯತೆ ಒಂದೆಡೆಯಾದರೆ, ರಕ್ತ ನಿಧಿ ಕೇಂದ್ರದಲ್ಲಿ ಅಗತ್ಯ ರಕ್ತ ಸಂಗ್ರಹವಿಲ್ಲದೇ ದಾನಿಗಳಿಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ.
ಕಳೆದ ವರ್ಷದ ಲಾಕ್ಡೌನ್ನಿಂದಲೇ ಅಪಘಾತ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಹೆರಿಗೆ, ರಕ್ತಹೀನತೆ, ಗರ್ಭಕೋಶ ಶಸ್ತ್ರಚಿಕಿತ್ಸೆ, ಹಿಮೋಫಿಲಿಯಾ ಪ್ರಕರಣಗಳಿಗೆ ಹೆಚ್ಚಿನ ಬೇಡಿಕೆ ಇದೆ. ಮೈಸೂರಿನಿಂದಲೂ ತರಿಸಿಕೊಡಲಾಗುತ್ತಿದೆ. ಕೊರೊನಾ ಕಾರಣಕ್ಕೆ ಬ್ಲಡ್ ಕ್ಯಾಂಪ್ಗಳನ್ನು ನಿರ್ವಹಿಸುವುದು ಕಷ್ಟಕರವಾಗಿದೆ ಎಂದು ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ದಿವ್ಯಾ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ್ದಾರೆ.
ಓದಿ: CET ಯಲ್ಲಿ ಉತ್ತಮ ಅಂಕದ ಅನುಮಾನ: ರಿಸಲ್ಟ್ಗೂ ಮುನ್ನವೇ ಸೊರಬದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ
ರಕ್ತದಾನಕ್ಕೆ ಮನವಿ:
ಸರ್ವೇ ಸಾಮಾನ್ಯವಾಗಿ ಆಗಾಗ್ಗೆ ರಕ್ತದಾನ ಮಾಡುತ್ತಿರುವ ಹೆಗ್ಗವಾಡಿಪುರದ ಅಜಯ್ ಈಟಿವಿ ಭಾರತದೊಂದಿಗೆ ಮಾತನಾಡಿ, ಇತ್ತೀಚೆಗೆ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ರಕ್ತ ಕೊರತೆ ಎದುರಾಗುತ್ತಿದ್ದರಿಂದ ನಾನು ಮತ್ತು ನನ್ನ ಸ್ನೇಹಿತರೊಂದಿಗೆ ರಕ್ತದಾನ ಮಾಡಿಸಿದೆ. ಆರೋಗ್ಯವಂತ ವ್ಯಕ್ತಿಗಳು ಆದಷ್ಟು ರಕ್ತದಾನ ಮಾಡಬೇಕು. ಒಬ್ಬರು ರಕ್ತ ನೀಡಿದರೆ ಮೂವರ ಪ್ರಾಣ ಉಳಿಸಿದಂತಾಗಲಿದೆ ಎಂದು ಮನವಿ ಮಾಡಿಕೊಂಡರು.