ಚಾಮರಾಜನಗರ: ಜೇನು ಎಂದರೇ ಅದು ಸಿಹಿಯ ಪರ್ಯಾಯ ಪದವೇ ಆಗಿದೆ. ಸಕ್ಕರೆ, ಬೆಲ್ಲಕ್ಕೆ ಪರ್ಯಾಯವಾಗಿ ಸೇವಿಸುವುದು ನೋಡಿರುತ್ತೀರಿ, ಆದರೆ ಈ ಕಾಡಲ್ಲಿ ಕಹಿ ಜೇನು ಸಿಗುತ್ತದೆ.
ಅರೇ ಇದೇನಪ್ಪಾ ಜೇನಲ್ಲೂ ಕಹಿ ಉಂಟಾ ಎಂಬ ನಿಮ್ಮ ಪ್ರಶ್ನೆಗೆ ಹೌದು ಎಂಬುದೇ ಉತ್ತರ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ನೇರಳೆ ಹೂವು ಬಿಡುವ ಕಾಲದಲ್ಲಿ ಕಹಿ ಜೇನು ಸಿಗಲಿದೆ. ಸ್ವಲ್ಪ ಸಿಹಿ - ಹೆಚ್ಚು ತೊಗರಿನ ರುಚಿ ಕೊಡುವ ಜೇನುತುಪ್ಪ ಸೀಸನ್ ಬಂದಿದ್ದು ನೂರಾರು ಮಂದಿ ಕಹಿ ಜೇನನ್ನು ಸವಿಯುತ್ತಿದ್ದಾರೆ.
ನೇರಳೆ ಜೇನಿಗೆ ಬಲು ಬೇಡಿಕೆ: ಬಿಳಿಗಿರಿರಂಗನ ಬೆಟ್ಟದಲ್ಲಿ ಹೆಜ್ಜೇನು, ತುಡುವೆ, ಕೋಲು, ನೆಸರೆ ಹಾಗೂ ನೇರಳೆ ಎಂಬ 5 ತರಹದ ಜೇನು ಸಿಗಲಿದ್ದು ನೇರಳೆ ಹೂಗಳಿಂದ ಮಕರಂದ ಹೀರುವ ನೇರಳೆ ಜೇನು ಕಹಿರುಚಿ ಕೊಡುವುದು ವಿಶೇಷವಾಗಿದೆ. ನೇರಳೆ, ಕೋಲು, ನೆಸರೆ ಜೇನು ತುಪ್ಪ ಸಿಗುವುದು ಅತ್ಯಲ್ಪ. ಆದ್ದರಿಂದ ಅಡವಿ ನೇರಳೆ ಜೇನಿಗೆ ಬಲು ಬೇಡಿಕೆ ಇದೆ.
'ಸ್ವಲ್ಪ ಸಿಹಿ ಹೆಚ್ಚು ಕಹಿ ಇರುವ ನೇರಳೆ ಜೇನಿಗೆ ಚಿಕಿತ್ಸಕ ಗುಣಗಳು ಬಹಳಷ್ಟಿದ್ದು, ಮಧುಮೇಹಿಗಳು ಇದನ್ನು ಕೊಂಡೊಯ್ಯುತ್ತಾರೆ. ನೇರಳೆ ಜೇನು ಸೀಸನ್ ಗಷ್ಟೇ ಬರಲಿದ್ದು ಅಡವಿ ತುಪ್ಪದ ಗುಣಮಟ್ಟವೂ ಚೆನ್ನಾಗಿದೆ' ಎಂದು ಸೋಲಿಗ ಸಮುದಾಯದ ಮುಖಂಡ ಡಾ.ಮಹಾದೇವಗೌಡ ಹೇಳಿದರು.
'ನಾನು ಇದುವರೆಗೆ ಸಿಹಿ ಜೇನನಷ್ಟೇ ಸೇವಿಸಿದ್ದೆ. ಬಿಳಿಗಿರಿರಂಗನ ಬೆಟ್ಟಕ್ಕೆ ಬಂದಾಗ ಈ ಕಾಲದಲ್ಲಿ ಕಹಿ ಜೇನು ಸಿಗುವುದು ತಿಳಿದು ಸೇವಿಸಿದೆ. ಬಹಳ ಚೆನ್ನಾಗಿದೆ' ಎಂದು ನಿವೃತ್ತ ಶಿಕ್ಷಕ ರಾಜೇಂದ್ರ ಹೇಳಿದರು.
ಬಿಳಿಗಿರಿಬನದಲ್ಲಿ ಒಂದೇ ಬಾರಿ ಸಾವಿರಕ್ಕೂ ಪ್ರಬೇಧದ ಮರ -ಗಿಡಗಳು ಹೂ ಬಿಡುವ ಅದ್ಬುತ ಪ್ರಕೃತಿ ಹೊಂದಿದೆ. ಸಿಹಿ ಎಂದರಷ್ಟೇ ಜೇನು ಎನ್ನುವವರಿಗೆ ಈ ನೇರಳೆ ಜೇನು ಹೊಸ ರುಚಿ ನೀಡಲಿದೆ.
ಇದನ್ನೂ ಓದಿ: ಅಪರೂಪದ ಉತ್ಖನನ : ಚಾಮರಾಜನಗರದಲ್ಲಿ ಶಿಲಾಯುಗದ ಸಮಾಧಿಗಳು ಪತ್ತೆ