ಗುಂಡ್ಲುಪೇಟೆ: ಕರ್ತವ್ಯ ಲೋಪವೆಸಗಿದ ತಾಲೂಕಿನ ಬೀಮನಬೀಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ.ಕೆ. ಶ್ರೀನಿವಾಸ ಅವರನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೋಯರ್ ಅಮಾನತು ಮಾಡಿದ್ದಾರೆ.
ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸದಿರುವುದು ಮತ್ತು ಮೇಲಾಧಿಕಾರಿಗಳ ಆದೇಶ ಪಾಲಿಸದೆ ನಿರ್ಲಕ್ಷ್ಯ ತೋರುವ ಮೂಲಕ ಕರ್ನಾಟಕ ನಾಗರಿಕ ಸೇವಾ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಸಾಬೀತಾದ ಹಿನ್ನೆಲೆ ಅಮಾನತು ಮಾಡಲಾಗಿದೆ.
ಗ್ರಾಮ ಪಂಚಾಯತ್ ಕಚೇರಿಯಲ್ಲಿ ಯಾವುದೇ ದಾಖಲಾತಿಯನ್ನು ಸಮರ್ಪಕವಾಗಿ ನಿರ್ವಹಿಸದಿರುವುದು. ಕ್ರಿಯಾ ಯೋಜನೆ, ವಾರ್ಡ್ ಸಭೆ, ಗ್ರಾಮ ಸಭೆ, ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದಿರುವ ನಡವಳಿ ಪುಸ್ತಕಗಳನ್ನು ಅನುಮೋದಿಯ ಕ್ರಿಯಾ ಯೋಜನೆಯ ಪಟ್ಟಿಯಲ್ಲಿ ಸೇರಿಸದಿರುವುದು. ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಹೊರಡಿಸಲಾದ ನಿಬಂಧನೆಗಳನ್ನು ಪಾಲಿಸದೆ ಸಹಾಯಧನ ಪಾವತಿ ಮಾಡಿರುವ ಆರೋಪ ಪಿಡಿಒ ಶ್ರೀನಿವಾಸ್ ಅವರ ಮೇಲಿದೆ.
14 ನೇ ಹಣಕಾಸು ಆಯೋಗದ ಅನುದಾನ ಬಳಕೆಯಲ್ಲಿ ಯೋಜನೆಯ ಮಾರ್ಗಸೂಚಿ ಅನುಸರಿಸದೆ ಸಭೆ ಸಮಾರಂಭಗಳ ವೆಚ್ಚ ಭರಿಸಿರುವುದು ಮತ್ತು ಕಾಮಗಾರಿ ಮತ್ತು ಸರಬರಾಜು ಬಿಲ್ಲುಗಳಲ್ಲಿ ಶಾಸನ ಬದ್ದ ಕಟಾವಣೆ ಮತ್ತು ಶಾಸನ ಬದ್ಧವಲ್ಲದ ಕಟಾವಣೆಗಳನ್ನು ಸಂಬಂಧಿಸಿದ ಲೆಕ್ಕ ಶೀರ್ಷಿಕೆ ಮತ್ತು ಸರ್ಕಾರಕ್ಕೆ ಜಮೆ ಮಾಡಿರುವುದಿಲ್ಲ. ಎಸ್ಕ್ರೋ ಖಾತೆಯಡಿ 2017-18 ನೇ ಸಾಲಿನಲ್ಲಿ 3.70 ಲಕ್ಷ ರೂ. ಹಣವನ್ನು ಯಾವ ಉದ್ದೇಶಕ್ಕೆ ಮತ್ತು ಯಾರಿಗೆ ಪಾವತಿ ಮಾಡಲಾಗಿದೆ ಎಂಬುದರ ಬಗ್ಗೆ ದಾಖಲೆ ಇಲ್ಲ. 2018-19 ನೇ ಸಾಲಿನಲ್ಲಿ ಮಂಜು ಎಂಬವರ ಹೆಸರಿನಲ್ಲಿ 5.84 ಲಕ್ಷ ರೂ. ಡ್ರಾ ಮಾಡಲಾಗಿದೆ. ಡ್ರಾ ಮಾಡಿರುವ ಮೊತ್ತದ ಪೂರಕ ದಾಖಲೆಗಳನ್ನು ಲೆಕ್ಕ ತಪಾಸಣೆಗೆ ಒಪ್ಪಿಸಿರುವುದಿಲ್ಲ. ಒಟ್ಟು 9.54 ಲಕ್ಷ ರೂ. ದುರುಪಯೋಗ ಆಗಿರುವುದು ಕಂಡು ಬಂದಿದೆ. ಇದು ನಿಯಮಗಳ ಉಲ್ಲಂಘನೆ ಎಂದು ವರದಿ ನೀಡಲಾಗಿದೆ.