ಚಾಮರಾಜನಗರ: ಮುಂದಿನ ವಿಧಾನಸಭೆ ಚುನಾವಣೆಯ ಕೈ ಟಿಕೆೆಟ್ ಪಡೆಯಲು ಈಗಾಗಲೇ ಜಿಲ್ಲೆಯಿಂದ ಹಲವಾರು ಅರ್ಜಿ ಸಲ್ಲಿಕೆಯಾಗಿದೆ. ಹಾಲಿ ಮಾಜಿ ಶಾಸಕರುಗಳು ಹೆಚ್ಚಾಗಿ ಜಿಲ್ಲೆಯಿಂದ ಅರ್ಜಿ ಸಲ್ಲಿಸಿದ್ದು, ಆದರೆ ಕೊಳ್ಳೇಗಾಲ ಕ್ಷೇತ್ರದಲ್ಲಿ ಕೈ ಟಿಕೆಟ್ ಗೆ ಆಕಾಂಕ್ಷಿತರಲ್ಲಿ ಭಾರೀ ಪೈಪೋಟಿ ಏರ್ಪಟ್ಟಿದೆ. ಚಾಮರಾಜನಗರ ಕ್ಷೇತ್ರದಿಂದ ಹ್ಯಾಟ್ರಿಕ್ ಬಾರಿಸಿರುವ ಸಿ.ಪುಟ್ಟರಂಗಶೆಟ್ಟಿ ಹಾಗೂ ಹನೂರ ಕ್ಷೇತ್ರದಿಂದ ಸತತ ಮೂರನೇ ಬಾರಿ ಆಯ್ಕೆಯಾಗಿರುವ ಆರ್.ನರೇಂದ್ರ ಅವರಿಗೆ ಯಾವುದೇ ಅಡೆತಡೆಗಿಳಿಲ್ಲ.
ಗುಂಡ್ಲುಪೇಟೆ ಕ್ಷೇತ್ರ: ಆದರೆ ಗುಂಡ್ಲುಪೇಟೆ ಕ್ಷೇತ್ರದಿಂದ ದಿ.ಎಚ್.ಎಸ್.ಮಹಾದೇವ ಪ್ರಸಾದ್ ಪುತ್ರ ಗಣೇಶ್ ಪ್ರಸಾದ್ , ಹಂಗಳ ನಂಜಪ್ಪ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ ಎಂದು ಮಾಹಿತಿ ಬಂದಿದ್ದು ಇಬ್ಬರೂ ಅರ್ಜಿ ಹಾಕಿದ್ದಾರೆ.
ಕೊಳ್ಳೇಗಾಲದಲ್ಲಿ ಮಾಜಿಗಳದ್ದೇ ಹವಾ: ಚಾಮರಾಜನಗರ ಜಿಲ್ಲೆಯಲ್ಲಿ ಕೊಳ್ಳೇಗಾಲ ವಿಧಾನಸಭೆ ಕ್ಷೇತ್ರಕ್ಕೆ ಮಾತ್ರ ಕಾಂಗ್ರೆಸ್ ಟಿಕೆಟ್ ಗೆ ಮಾತ್ರ ಪೈಪೋಟಿ ಏರ್ಪಟ್ಟಿದೆ. ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ, ಬಾಲರಾಜು ಹಾಗೂ ಜಯಣ್ಣ ಟಿಕೆಟ್ ಗೆ ಅರ್ಜಿ ಹಾಕಿದ್ದಾರೆ. ಮೂವರು ಕೂಡ ಪಕ್ಷ ಸಂಘಟನೆ, ಸಾಮಾಜಿಕ ಸೇವೆಯಲ್ಲಿ ತೊಡಗಿದ್ದು ಟಿಕೆಟ್ ಯಾರಿಗೇ ಸಿಗಲಿದೆ ಎಂಬುವುದು ಕಗ್ಗಂಟಾಗಿದೆ. ಕೈ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಕೆಗೆ ನವೆಂಬರ್ 15 ಕೊನೆಯ ದಿನವಾಗಿತ್ತು. ಮತ್ತೆ, ದಿನಾಂಕ ಮುಂದೂಡಿದ್ದು, ನ. 21ರ ವರೆಗೂ ವಿಸ್ತರಿಸಲಾಗಿದೆ. ಉಳಿದವರು ಯಾರಾದರೂ ಅರ್ಜಿ ಸಲ್ಲಿಸುವರೇ ಎಂಬುದನ್ನು ಕಾದು ನೋಡಬೇಕಿದೆ.
ನಂಜನಗೂಡು ಕ್ಷೇತ್ರ: ಚಾಮರಾಜನಗರದ ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ರಾಜ್ಯ ರಾಜಕಾರಣಕ್ಕೆ ಮರಳುವ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ. ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಧ್ರುವನಾರಾಯಣ ಹಾಗೂ ಎಚ್.ಸಿ. ಮಹಾದೇವಪ್ಪ ಇಬ್ಬರೂ ಅರ್ಜಿ ಸಲ್ಲಿಸಿದ್ದಾರೆ. ಕೊನೆ ಕ್ಷಣದಲ್ಲಿ ಅಂತಿಮಗೊಳಿಸುವ ಬದಲು ಈ ವರ್ಷಾಂತ್ಯದಲ್ಲಿ ಟಿಕೆಟ್ ಘೋಷಣೆ ಮಾಡಿದರೇ ಗೊಂದಲ, ಒಳೇಟಿಗೆ ಅವಕಾಶ ಇರುವುದಿಲ್ಲ ಎನ್ನುವುದು ಕಾಂಗ್ರೆಸ್ ಕಾರ್ಯಕರ್ತರ ಮಾತಾಗಿದೆ.
ಇದನ್ನೂಓದಿ:ನಿಮ್ಮ ವಿರುದ್ಧ ನಾನು ಸೋತರೆ ಶಿರಚ್ಛೇದನ ಮಾಡಿಕೊಳ್ಳುತ್ತೇನೆ : ಮಾಜಿ ಸಂಸದ ಶಿವರಾಮೇಗೌಡ