ಚಾಮರಾಜನಗರ: ಕೃಷಿ ಹೊಂಡ ನಿರ್ಮಿಸದೆ ರೈತರ ಹೆಸರಿನಲ್ಲಿ ಸಹಾಯಧನ ಪಡೆದು ಕೃಷಿ ಅಧಿಕಾರಿಗಳು ಹಣ ಗುಳುಂ ಮಾಡಿರುವ ಆರೋಪ ಕೇಳಿ ಬಂದಿದೆ.
ಕೆಲ ರೈತರಿಗೆ ಒಂದಿಷ್ಟು ಹಣನೀಡಿ ನಕಲಿ ಸಹಿ ಮೂಲಕ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿಸಿ ಬಳಿಕ ಅವರಿಂದಲೇ ಇಲಾಖೆ ಅಧಿಕಾರಿಗಳು ಹಣ ಪಡೆದಿದ್ದಾರೆ ಎಂದು ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದ ಕೆ.ಕೆ. ರಂಗರಾಜು ಗಂಭೀರ ಆರೋಪಿಸಿದ್ದಾರೆ. ಈ ಕುರಿತು ಮುಖ್ಯ ಜಾಗೃತಿ ಇಲಾಖೆ ಅಧಿಕಾರಿಗಳಿಗೆ ದೂರನ್ನು ಸಹ ನೀಡಿದ್ದಾರೆ.
95 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ ಎಂದು ಈಗಾಗಲೇ ನಿರ್ಮಿಸಿರುವ ಕೃಷಿ ಹೊಂಡದ ಫೋಟೋ ತೆಗೆಸಿ ರೈತರ ಕಣ್ಣಿಗೆ ಮಣ್ಣೆರಚಿ ಅಧಿಕಾರಿಗಳು ಹಣ ಲಪಟಾಯಿಸಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ಕಳೆದ 6 ವರ್ಷಗಳಿಂದ ಈ ಅವ್ಯವಹಾರ ನಡೆದಿದ್ದು, ಕೃಷಿ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳು ಭಾಗಿಯಾಗಿದ್ದಾರೆ. ಈ ಸಂಬಂಧ ಕೂಡಲೇ ತನಿಖೆ ನಡೆಸಿ ಹಗರಣದಲ್ಲಿ ಪಾಲ್ಗೊಂಡವರನ್ನು ಅಮಾನತು ಮಾಡಬೇಕು. ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಕ್ಕಾಗಿ 60 ಸಾವಿರ ರೂ. ಸಹಾಯಧನ ನೀಡಲಿದ್ದು, 50 ಲಕ್ಷ ರೂ.ಗಿಂತಲೂ ಹೆಚ್ಚಿನ ಹಣ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ್ದಾರೆ ಎಂದು ರಂಗರಾಜು ಆರೋಪಿಸಿದ್ದಾರೆ.