ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲೂಕಿನ ಇತಿಹಾಸ ಪ್ರಸಿದ್ಧ ಯಾತ್ರಾಸ್ಥಳ ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದ ಮಹಾ ಸಂಪ್ರೋಕ್ಷಣೆ ಕಾರ್ಯಕ್ರಮ ಸಂಪನ್ನಗೊಂಡಿದ್ದು, ನಾಲ್ಕು ವರ್ಷಗಳ ಬಳಿಕ ಬಿಳಿಗಿರಿ ರಂಗನಾಥ ದೇವಾಲಯ ಭಕ್ತರಿಗೆ ಮುಕ್ತವಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ಜೀರ್ಣೋದ್ಧಾರಕ್ಕಾಗಿ ದೇವಾಲಯ ಮುಚ್ಚಲ್ಪಟ್ಟಿತ್ತು. ಕಳೆದ 5 ದಿನಗಳಿಂದ ನಡೆಯುತ್ತಿದ್ದ ಸಂಪ್ರೋಕ್ಷಣೆ ಕಾರ್ಯಕ್ರಮ ಇಂದು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ದೇವಾಲಯ ಪ್ರವೇಶಕ್ಕೆ ಭಕ್ತರಿಗೆ ಜಿಲ್ಲಾಡಳಿತ ಅನುವು ಮಾಡಿಕೊಟ್ಟಿದೆ.
ಮುಖ್ಯ ಆಗಮಿಕ ರಾಜಗೋಪಾಲ್ ನೇತೃತ್ವದಲ್ಲಿ 40ಕ್ಕೂ ಹೆಚ್ಚು ಪುರೋಹಿತರು ವಿಧಿ ವಿಧಾನದಂತೆ ಧಾರ್ಮಿಕ ಕಾರ್ಯ ನಡೆಸಿದರು. ಇಂದು ಬೆಳಗಿನ ಜಾವ 4.30 ರ ಹೊತ್ತಿಗೆ ಪ್ರಾಣ ದೇವರ ಪ್ರತಿಷ್ಠಾಪನೆ ಮಾಡಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.