ಚಾಮರಾಜನಗರ: ಕಾಫಿ ಬೆಳೆಯಿಂದ ಗಿರಿಜನರ ಬದುಕು ಹಸನಾಗುತ್ತಿದ್ದು, ಅಡವಿ ಬ್ರಾಂಡ್ನ ಕಾಫಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹೌದು, ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಪೋಡುಗಳ ಜನರು ಸ್ಥಾಪಿಸಿಕೊಂಡಿರುವ ಬಿಳಿಗಿರಿ ರಂಗನಾಥಸ್ವಾಮಿ ಸೋಲಿಗರ ಸಂಸ್ಕರಣ ಸಂಘ ಹೊರತಂದಿರುವ ಅಡವಿ ಬ್ರಾಂಡ್ನ ಕಾಫಿ ದಿನೆ ದಿನೇ ಗ್ರಾಹಕರನ್ನು ಸೆಳೆಯುತ್ತಿದ್ದು, ಕಾಡಿನಮಕ್ಕಳ ಕಾಫಿ ಕಂಪು ಜೋರಾಗಿದೆ.
ಪ್ರತಿ ತಿಂಗಳಿಗೆ 75-100 ಕೆಜಿ ಕಾಫಿ ಪುಡಿ ಮಾರಾಟವಾಗುತ್ತಿದ್ದು, ಬಿಆರ್ಟಿ ಮತ್ತು ಮೈಸೂರಿನ ಅಂಗಡಿಯೊಂದರಿಂದ ಮಾತ್ರ ಇಷ್ಟು ಮಾರಾಟವಾಗುತ್ತಿದೆ. ಈಗ ಅಡವಿ ಬ್ರಾಂಡ್ ಕಾಫಿ ಪುಡಿ 200 ಗ್ರಾಂ ಮತ್ತು 100 ಗ್ರಾಂ ಪ್ಯಾಕೆಟ್ಗಳಲ್ಲಿ ಲಭ್ಯವಿದೆ.
625 ಕುಟುಂಬ.. 1 ಲಕ್ಷ ಕೆಜಿ ಕಾಫಿ:
ಬಿಳಿಗಿರಿ ರಂಗನ ಬೆಟ್ಟದಲ್ಲಿನ 22 ಪೋಡುಗಳ 600ಕ್ಕೂ ಹೆಚ್ಚು ಕುಟುಂಬಗಳು ಕಾಫಿ ಕೃಷಿಯಲ್ಲಿ ತೊಡಗಿಕೊಂಡಿವೆ. ವರ್ಷಕ್ಕೆ 1 ಲಕ್ಷ ಕೆಜಿ ಕಾಫಿ ಉತ್ಪಾದಿಸಲಿದ್ದು, ಸೋಲಿಗರ ಸಂಸ್ಕರಣ ಸಂಘವು ಪ್ರಾರಂಭಿಕವಾಗಿ 1,250 ಕೆಜಿ ಕಾಫಿ ಬೀಜ ಕೊಂಡುಕೊಂಡಿದೆ.
ಏಟ್ರಿ ನೆರವಿನ ಮೂಲಕ 9 ಪೋಡುಗಳ ಜನರು ಪ್ರಾರಂಭಿಸಿದ ಸಂಸ್ಕರಣ ಘಟಕವು, ಕಿರು ಅರಣ್ಯ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದವು. ಮಾರ್ಚ್ನಲ್ಲಿ ಅಡವಿ ಎಂಬ ಬ್ರಾಂಡ್ ಮೂಲಕ ಕಿರು ಅರಣ್ಯ ಉತ್ಪನ್ನದೊಂದಿಗೆ ಕಾಫಿಪುಡಿ ಮಾರಾಟ ಮಾಡಲಾಗುತ್ತಿದೆ. ಜೊತೆಗೆ ಚಿಕೋರಿ ರಹಿತ ಕಾಫಿ ಪುಡಿ, ಗ್ರೀನ್ ಕಾಫಿ ಬೀಜಗಳನ್ನು ಮಾರಾಟ ಮಾಡಲಾಗುತ್ತಿದೆ. ಕಾಫಿ ಬೀಜ ಕೊಂಡು ಬೆಂಗಳೂರಿನಲ್ಲಿ ಪುಡಿ ಮಾಡಿಸಲಾಗುತ್ತೆ. ಸಂಘದಲ್ಲಿ 14 ನಿರ್ದೇಶಕರು, 100 ಸದಸ್ಯರಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ ಈಟಿವಿ ಭಾರತಕ್ಕೆ ತಿಳಿಸಿದರು.
ಇನ್ನು, ಸಂಘವು ಸದಸ್ಯರು ಮತ್ತು ಕಾಫಿ ಬೆಳೆಗಾರರಿಂದ ಮಧ್ಯವರ್ತಿಗಳ ಅವಕಾಶ ಇಲ್ಲದೇ ಅಂದಿನ ಮಾರುಕಟ್ಟೆ ಬೆಲೆಯಂತೆ ಕಾಫಿ ಬೀಜ ಖರೀದಿಸುತ್ತದೆ. ವರ್ಷಾಂತ್ಯದಲ್ಲಿ ಸಂಘಕ್ಕೆ ಬಂದ ಲಾಭವು ಸಮಯದಾಯದ ಅಭಿವೃದ್ಧಿಗೆ ಬಳಸಿಕೊಳ್ಳಲಿದೆ.
ಕಾಫಿ ಬಿಟ್ಟು ಬೇರೆನಿದೆ?
ಅಡವಿ ಬ್ರಾಂಡ್ನಲ್ಲಿ ಕಾಫಿಯಷ್ಟೇ ಅಲ್ಲದೇ ಕರಿಮೆಣಸು, ಜೇನುತುಪ್ಪ, ಬೆಟ್ಟದ ನೆಲ್ಲಿಕಾಯಿ, ಉಪ್ಪಿನಕಾಯಿ, ನೇರಳೆ ಶರಬತ್ತು ಸಿಗಲಿದೆ. ಮಾರಾಟಗಾರರು ಇಲ್ಲವೇ ಗ್ರಾಹಕರು ಅಡವಿ ಬ್ರಾಂಡ್ನ ವಸ್ತುಗಳಿಗಾಗಿ ಮೊಬೈಲ್ - 99012 23423 ಸಂಪರ್ಕಿಸಬಹುದಾಗಿದೆ.