ಚಾಮರಾಜನಗರ : ನಟ ಡಾಲಿ ಧನಂಜಯ್ ಅವರಿಂದು ಸ್ನೇಹಿತರ ಜೊತೆಗೂಡಿ ಪ್ರಸಿದ್ಧ ಯಾತ್ರ ಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಮಾದಪ್ಪನ ದರ್ಶನ ಪಡೆದರು. ಮಲೆಮಹದೇಶ್ವರ ಬೆಟ್ಟಕ್ಕೆ ಡಾಲಿ ಧನಂಜಯ್ ಹಾಗೂ ನಾಗಭೂಷಣ್ ಮತ್ತಿತರರು ಭೇಟಿ ನೀಡಿ ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಕ್ಷೇತ್ರದ ಸಾಲೂರು ಬೃಹನ್ಮಠಕ್ಕೆ ಭೇಟಿ ನೀಡಿ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳ ಆಶೀರ್ವಾದ ಪಡೆದರು. ಜೊತೆಗೆ ಮಲೆಮಹದೇಶ್ವರ ಬೆಟ್ಟದಲ್ಲಿರುವ 108 ಅಡಿ ಎತ್ತರದ ಮಾದಪ್ಪನ ಪ್ರತಿಮೆ ಜೊತೆ ಡಾಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಮಲೆಮಹದೇಶ್ವರ ಬೆಟ್ಟ ನಾಡಿನ ಪ್ರಸಿದ್ಧ ಯಾತ್ರ ಸ್ಥಳಗಳಲ್ಲಿ ಒಂದಾಗಿದೆ. ಅತ್ಯಧಿಕ ಆದಾಯ ಹೊಂದಿರುವ ರಾಜ್ಯದ ಎರಡನೇ ದೇವಾಲಯ ಇದಾಗಿದೆ. ಕಳೆದ ವರ್ಷ ಕ್ಷೇತ್ರಕ್ಕೆ ಬರೋಬ್ಬರಿ 50 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದಿದ್ದರು. ವಾರಾಂತ್ಯ ಹಾಗೂ ಸೋಮವಾರ, ಅಮವಾಸ್ಯೆ ದಿನಗಳಲ್ಲಿ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ಇಲ್ಲಿಗೆ ಭಕ್ತರ ಸಂಖ್ಯೆ ದುಪ್ಪಟ್ಟಾಗಿದೆ.
ಇದನ್ನೂ ಓದಿ : ನಾಳೆ ಯಶ್ ಬರ್ತ್ಡೇ: 'ಟಾಕ್ಸಿಕ್' ಅಪ್ಡೇಟ್ಸ್ ನಿರೀಕ್ಷೆಯಲ್ಲಿ ಅಭಿಮಾನಿಗಳು