ಚಾಮರಾಜನಗರ: ಹುಲಿ ದಾಳಿ ಪ್ರಕರಣ ಕಳೆದ ಎರಡು ವರ್ಷದ ಬಳಿಕ ಮತ್ತೆ ಜಿಲ್ಲೆಯಲ್ಲಿ ಮರುಕಳಿಸಿದೆ. ಗುಂಡ್ಲುಪೇಟೆ ತಾಲೂಕಿನ ಲಕ್ಕಿಪುರ ಸಮೀಪ ರೈತರಿಬ್ಬರ ಮೇಲೆ ಹುಲಿಯೊಂದು ದಾಳಿ ಮಾಡಿದೆ. ಗೋಪಾಲಪುರ ಗ್ರಾಮದ ಗವಿಯಪ್ಪ(45), ರಾಜಶೇಖರ್ ಎಂಬ ರೈತರ ಮೇಲೆ ಹುಲಿ ದಾಳಿ ನಡೆಸಿದ್ದು, ಅವರಿಗೆ ಗಂಭೀರ ಗಾಯಗಳಾಗಿವೆ.
ಗವಿಯಪ್ಪ ಎಂದಿನಂತೆ ಜಮೀನಿಗೆ ತೆರಳಿ ಕೆಲಸ ಮಾಡುತ್ತಿದ್ದ ವೇಳೆ ಹುಲಿ ದಾಳಿ ನಡೆಸಿದೆ. ಈ ವೇಳೆ ರೈತ ಕೂಗಿಕೊಂಡ ಹಿನ್ನೆಲೆ ಸುತ್ತಮುತ್ತಲ ಜಮೀನಿನ ರೈತರು ಧಾವಿಸಿದಾಗ ಹುಲಿ ಓಡಿಹೋಗಿ ಪಕ್ಕದ ಜಮೀನಿನ ಪೊದೆಯಲ್ಲಿ ಅವಿತುಕೊಂಡಿದೆ. ಈ ವೇಳೆ ಬಾಳೆ ತೋಟದಲ್ಲಿ ಅಡಗಿದ್ದ ಹುಲಿಯನ್ನು ನೋಡಲು ಹೋಗಿದ್ದ ರಾಜಶೇಖರ್ ಎಂಬವರ ಮೇಲೂ ಹುಲಿ ದಾಳಿ ನಡೆಸಿದೆ.
ಸದ್ಯ ಗಾಯಗೊಂಡಿರುವ ಗವಿಯಪ್ಪ ಅವರನ್ನು ಮೈಸೂರಿಗೆ, ರಾಜಶೇಖರ್ ಅವರನ್ನು ಗುಂಡ್ಲುಪೇಟೆ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಬಂಡೀಪುರ ವ್ಯಾಪ್ತಿಯ ಗೋಪಾಲಸ್ವಾಮಿ ಬೆಟ್ಟ ವಲಯದ ಅರಣ್ಯಾಧಿಕಾರಿ ನವೀನ್ ಕುಮಾರ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹುಲಿಯನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಕಿಕ್ಕಿರಿದು ಸೇರಿದ್ದು, ಬಾಳೆತೋಟದಲ್ಲಿ ಹುಲಿ ಅಡಗಿ ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಓದಿ : ಅಕ್ರಮ ಮನೆ ನಿರ್ಮಾಣ ಆರೋಪ: ಚಿಕ್ಕಮಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಜೆಸಿಬಿ