ಚಾಮರಾಜನಗರ : ಹುಲಿ ಘರ್ಜನೆ ಕೇಳಿದ ರೈತನೋರ್ವ ಗಾಬರಿಗೊಂಡು ಮರ ಏರುವ ಭರದಲ್ಲಿ ಕೆಳಗೆ ಬಿದ್ದು ಕೈ ಮುರಿದುಕೊಂಡಿರುವ ಘಟನೆ ತಾಲೂಕಿನ ವಡ್ಗಲ್‌ಪುರದಲ್ಲಿ ನಡೆದಿದೆ.
60ರ ವಯಸ್ಸಿನ ರಾಚಶೆಟ್ಟಿ ಎಂಬ ರೈತ ಕೈಮುರಿದುಕೊಂಡಿದ್ದಾರೆ. ಗ್ರಾಮದ ಹೊರವಲಯದ 4 ಎಕರೆ ಜಮೀನಲ್ಲಿ ರಾಗಿ, ಹುರುಳಿ ಬೆಳೆ ಬೆಳೆಯುತ್ತಿರುವ ರಾಚಶೆಟ್ಟಿ, ಕಾಡುಹಂದಿ, ಜಿಂಕೆಗಳ ಹಾವಳಿ ಹೆಚ್ಚಾಗಿರುವುದರಿಂದ ಬೆಳೆಗಳ ರಕ್ಷಣೆಗಾಗಿ ರಾತ್ರಿ ವೇಳೆ ಜಮೀನಿನ ಮರದ ಮೇಲೆ ಜಾಗ (ಅಟ್ಟಣಿಗೆ) ಮಾಡಿಕೊಂಡು ಮಲಗುತ್ತಿದ್ದರು.
ಕಳೆದ ಸೋಮವಾರ ರಾತ್ರಿ 9.30ರ ವೇಳೆಯಲ್ಲಿ ರಾಚಶೆಟ್ಟಿಗೆ ಹುಲಿ ಘರ್ಜನೆ ಕೇಳಿಸಿದೆ. ಮರವೇರುತ್ತಿದ್ದ ರಾಚಶೆಟ್ಟಿಗೆ ಸಮೀಪದಲ್ಲೆ ಹುಲಿ ಕಂಡಿದ್ದರಿಂದ ಬೆಚ್ಚಿ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಅವರ ಎಡಕೈನ ಮಣಿಕಟ್ಟು ಮುರಿದಿದ್ದು ಪಕ್ಕೆಲುಬಿಗೂ ಏಟು ಬಿದ್ದಿದೆ.
ಸಹಿಸಲಾಗದಷ್ಟು ನೋವಾದರೂ ಹುಲಿ ಭಯಕ್ಕೆ ಸದ್ದು ಮಾಡದೆ ಮತ್ತೆ ಮರ ಏರಿದ ರಾಚಶೆಟ್ಟಿ ಇಡೀ ರಾತ್ರಿ ಮೂಳೆ ಮುರಿತದಿಂದ ಒದ್ದಾಡಿದ್ದರು. ಆದರೆ, ಹುಲಿಯ ಕಠೋರ ಘರ್ಜನೆಗೆ ಬೆಚ್ಚಿ ನಲುಗಿ ಹಾಗೆಯೇ ಉಳಿದಿದ್ದರು. ಕೆಳಗಿಳಿದು ಮನೆಗೆ ಹೋಗಲು ಪ್ರಯತ್ನಿಸಿದರೆ ಜೀವಕ್ಕೆ ಕುತ್ತು ಬರಬಹುದೆಂಬ ಆತಂಕದಲ್ಲಿ ಬೆಳಗ್ಗೆವರೆಗೂ ಮರದ ಮೇಲೆ ಕಾಲ ಕಳೆದರು.
ಈ ಸಮಯದಲ್ಲಿ ಹುಲಿ ಸ್ಥಳದಿಂದ ಬೇರೆಡೆಗೆ ಹೋಗಿದೆ. ಜಮೀನು ಕಾಯಲು ಹೋಗುತ್ತಿದ್ದ ಅಪ್ಪ ಎಂದಿನಂತೆ ಮನೆಗೆ ಬರುತ್ತಿದ್ದ ಸಮಯಕ್ಕೆ ಮರಳದಿರುವುದರಿಂದ ದಿಗಿಲು ಗೊಂಡ ರಾಚಶೆಟ್ಟಿ ಮಗ ಸಿದ್ದರಾಜು ಎಂಬುವರು ಹೊಲದ ಬಳಿಗೆ ತೆರಳಿದ್ದಾರೆ.
ಈ ವೇಳೆ ಕೈ ಮೂಳೆ ಮುರಿದುಕೊಂಡು ಇಡೀ ರಾತ್ರಿ ಮರದ ಮೇಲೆ ಇದ್ದ ರಾಚಶೆಟ್ಟಿ ಅವರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಹುಲಿ ಘರ್ಜನೆ ಕೇಳಿ ಬೆಚ್ಚಿ ಬಿದ್ದಿರುವ ರೈತ ರಾಚಶೆಟ್ಟಿ, ಭಯದಿಂದ ಇನ್ನೂ ಹೊರ ಬಂದಿಲ್ಲ. ಹತ್ತಿರದಲ್ಲೇ ಕಂಡ ಹುಲಿ ಮೂರು ಬಾರಿ ಜೋರಾಗಿ ಘರ್ಜಿಸಿದ ಸದ್ದು ನೆನೆದು ನಡುಗುತ್ತಾರೆ. ಅರಣ್ಯ ಇಲಾಖೆ ಹುಲಿಯನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸುತ್ತಿದೆ.