ಚಾಮರಾಜನಗರ: ಕೆಲ ಜನರಲ್ಲಿ ಬೇರುಬಿಟ್ಟಿರುವ ನಿಧಿಯಾಸೆ ಇನ್ನೂ ಹೋಗಿಲ್ಲ ಎಂಬುದಕ್ಕೆ ಜಿಲ್ಲೆಯಲ್ಲಿ ನಡೆದಿರುವ ಘಟನೆಯೊಂದು ನಿದರ್ಶನವಾಗಿದೆ. ತನ್ನ ಮನೆಯಲ್ಲಿ ನಿಧಿಯಿದೆ ಎಂದು ಗುಂಡಿ ತೆಗೆದು ಶೋಧಿಸಿರುವ ಘಟನೆ ಚಾಮರಾಜನಗರ ತಾಲೂಕಿನ ಅಮ್ಮನಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸೋಮಣ್ಣ ಎಂಬುವರು ತಮ್ಮ ಮನೆಗೆ ಕೆಲದಿನಗಳ ಹಿಂದೆ ಬಂದಿದ್ದ ನಾಗರ ಹಾವನ್ನು ಕೊಂದುಹಾಕಿದ್ದರು. ಇದಾದ ಕೆಲ ದಿನಗಳ ಬಳಿಕ, ಮನೆಗೆ ಮತ್ತೆರಡು ಹಾವುಗಳು ಎಂಟ್ರಿ ಕೊಟ್ಟಿವೆ. ಇದರಿಂದ ಹೆದರಿದ ಕುಟುಂಬಸ್ಥರು ಕೇರಳ ಜ್ಯೋತಿಷಿ ಒಬ್ಬರನ್ನು ಸಂಪರ್ಕಿಸಿದಾಗ "ನಿಮ್ಮ ಮನೆಯಲ್ಲಿ ನಿಧಿ ಇದ್ದು, ಅದರ ಕಾವಲಿಗೆ ಹಾವುಗಳು ಬಂದಿವೆ" ಎಂದು ಹೇಳಿದ್ದಾರೆ.
ಬಳಿಕ ಜ್ಯೋತಿಷಿಯನ್ನೇ ಕರೆತಂದು ಮನೆಯೊಳಗೆ ಗುಂಡಿ ಅಗೆದು ಶೋಧಿಸಿದ್ದು, ಬರೀ ಮಣ್ಣು ಸಿಕ್ಕಿದೆ ಎಂದು ಗ್ರಾಮಸ್ಥರೊಬ್ಬರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ. ರಹಸ್ಯವಾಗಿ ನಡೆದಿದ್ದ ನಿಧಿ ಶೋಧ ಕಾರ್ಯ ಈಗ ಬೆಳಕಿಗೆ ಬಂದಿದ್ದು, ಚಾಮರಾಜನಗರ ಪೂರ್ವ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಪೊಲೀಸರು ಮನೆ ಯಜಮಾನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸದ್ಯ ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಸೋಮಣ್ಣ ಕುಟುಂಬ ಯಾರಿಗೂ ತಿಳಿಯದಂತೆ ಮನೆಯೊಳಗೆ 20 ಅಡಿಗೂ ಹೆಚ್ಚು ಗುಂಡಿ ತೆಗೆದು ಮಣ್ಣನ್ನು ಕೋಣೆಯೊಳಕ್ಕೆ ಸುರಿದಿದ್ದರು ಎಂದು ತಿಳಿದು ಬಂದಿದೆ.