ಚಾಮರಾಜನಗರ: ತನ್ನನ್ನು ಹೆದರಿಸಿ ಬೆದರಿಸಿ ಕಲ್ಲು ಕ್ವಾರಿ ಖರೀದಿಸಿ ಈಗ ಕೊಲೆ ಬೆದರಿಕೆ ಹಾಕಿ ದುಡ್ಡು ಕೊಡದೆ ಸತಾಯಿಸುತ್ತಿದ್ದಾರೆ ಎಂದು ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ವಿರುದ್ಧ ಗುಜರಾತ್ ಮೂಲದ ಉದ್ಯಮಿ ಗಂಭೀರ ಆರೋಪ ಮಾಡಿದ್ದಾರೆ.
ಚಾಮರಾಜನಗರದಲ್ಲಿ ಸುದ್ದುಗೋಷ್ಠಿ ನಡೆಸಿದ ಗುಜರಾತ್ ಮೂಲದ ಕಮಲೇಶ್ ಕುಮಾರ್ ಪಟೇಲ್, ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಸಮೀಪ ನಡೆಸುತ್ತಿದ್ದ 4 ಎಕರೆ ಕಲ್ಲು ಕ್ವಾರಿಗೆ ಕೆಲ ಸ್ಥಳೀಯರು ತೊಂದರೆ ಕೊಡುತ್ತಿದ್ದರು. ಸಹಾಯ ಕೇಳಿ ಶಾಸಕರ ಬಳಿ ಹೋದಾಗ ದಿನ ಕಳೆದಂತೆ ಶಾಸಕ ಸಿ.ಪುಟ್ಟರಂಗಶೆಟ್ಟಿ ತನಗೇ ಕೊಟ್ಟುಬಿಡು, ಹೊರ ರಾಜ್ಯದವನು ಗಣಿಗಾರಿಕೆ ಮಾಡುವುದು ಕಷ್ಟ ಎಂದು ಹೇಳಿ ಕ್ರಯಕ್ಕೆ ಒಪ್ಪಿಸಿದರು.
14 ಕೋಟಿ ರೂ.ಗೆ ಮಾತುಕತೆ ಆಗಿದ್ದ ಕ್ವಾರಿ ತನಗೇ ಕೊಲೆ ಬೆದರಿಕೆ ಹಾಕಿ ಅಷ್ಟೆಲ್ಲಾ ಕೊಡಲು ಸಾಧ್ಯವಿಲ್ಲ ಎಂದು ಧಮ್ಕಿ ಹಾಕಿ 12.50 ಕೋಟಿಗೆ ಅಂತಿಮಗೊಳಿಸಿ 1 ಕೋಟಿ ರೂ. ಬ್ಯಾಂಕ್ ಖಾತೆಗೆ ಜಮಾ ಮಾಡಿದರು. ತನಗೇ ಪೂರ್ಣವಾಗಿ ಹಣವನ್ನೇ ಕೊಡದೇ ಅನಧಿಕೃತವಾಗಿ ನೂರಾರು ಮೀ. ಕಲ್ಲು ತೆಗೆದಿದ್ದಾರೆ. ಮತ್ತೊಮ್ಮೆ ಗಲಾಟೆ ಮಾಡಿದಾಗ 2.54 ಲಕ್ಷ ರೂ. ಕೊಟ್ಟಿದ್ದು 9 ಕೋಟಿ ಕೊಡದೇ ವಂಚಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ತನ್ನ ಹಾಗೂ ತನ್ನ ಪತ್ನಿ ವಿರುದ್ಧ ಸುಳ್ಳು ಜಾತಿನಿಂದನೆ ಕೇಸ್ ದಾಖಲಿಸಿದ್ದಾರೆ. ತಾನು ದೂರು ಕೊಡಲು ಹೋದರೆ ಪೊಲೀಸರು ಸ್ಪೀಕರ್ ಆದೇಶ ಬೇಕು ಎನ್ನುತ್ತಾರೆ. ಶಾಸಕರ ಅಳಿಯ ರಾಮಚಂದ್ರ ಕೂಡ ತನಗೆ ಕೊಲೆ ಬೆದರಿಕೆ ಹಾಕಿದ್ದು, ಅವರ ವಿರುದ್ಧವೂ ದೂರು ಕೊಟ್ಟು ಎರಡು ತಿಂಗಳುಗಳಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಮಲೇಶ್ ಅಳಲು ತೋಡಿಕೊಂಡಿದ್ದಾರೆ.
ಪ್ರಧಾನಿ, ಗೃಹಮಂತ್ರಿ, ರಾಜ್ಯಪಾಲರು, ಮುಖ್ಯಮಂತ್ರಿಗೆ ಈ ಬಾರಿ ದೂರು ಸಲ್ಲಿಸುತ್ತೇನೆ, ತನಗೆ ತನ್ನ ಹಣ ಬೇಕು ಇಲ್ಲವೇ ಅವರು ಕೊಟ್ಟ ಹಣ ಕೊಡಲಿದ್ದು ತೆಗೆದಿರುವ ಕಲ್ಲನ್ನು ತನಗೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು, ಆರೋಪದ ಸಂಬಂಧ ಶಾಸಕರನ್ನು ಸಂಪರ್ಕಿಸಲು ಪ್ರಯತ್ನಿಸಿದರಾದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.
ಇದನ್ನೂ ಓದಿ: 20 ಮಿಲಿಯನ್ ಡಾಲರ್ ರೂಪಾಯಿಗೆ ಪರಿವರ್ತನೆ : ಸತ್ಯೇಂದ್ರ ಜೈನ್ ವಿರುದ್ಧ ಗಂಭೀರ ಆರೋಪ ಮಾಡಿದ ಸುಕೇಶ್ ಚಂದ್ರಶೇಖರ್