ಚಾಮರಾಜನಗರ: ಜಮೀನಿನ ಬೇಲಿಯಲ್ಲಿ ಅಡಗಿದ್ದ ಭಾರಿ ಗಾತ್ರದ ಹೆಬ್ಬಾವನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟಿರುವ ಘಟನೆ ಯಳಂದೂರು ತಾಲೂಕಿನ ಅಮೃತಭೂಮಿಯಲ್ಲಿ ನಡೆದಿದೆ. ಇಲ್ಲಿನ ಬಾಳೆ ತೋಟದಲ್ಲಿನ ಬೇಲಿ ಕತ್ತರಿಸುತ್ತಿದ್ದ ವೇಳೆ ಹೆಬ್ಬಾವು ಇರುವುದು ತಿಳಿದು ಅಮೃತ ಭೂಮಿಯ ನೌಕರರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಹೆಬ್ಬಾವಿನ ಗಾತ್ರ ಕಂಡು ಸೆರೆ ಹಿಡಿಯುವ ದುಸ್ಸಾಹಕ್ಕೆ ಹೋಗದ ಅರಣ್ಯ ಇಲಾಖೆ ಸಿಬ್ಬಂದಿ ಚಾಮರಾಜನಗರದ ಉರಗ ರಕ್ಷಕ ಸ್ನೇಕ್ ಚಾಂಪ್ ಅವರನ್ನು ಕರೆಸಿಕೊಂಡು ಹಾವನ್ನು ಸೆರೆ ಹಿಡಿದಿದ್ದಾರೆ.
13.5 ಅಡಿ ಉದ್ದದ 45 ಕೆಜಿ ತೂಕದ ಈ ಹೆಬ್ಬಾವು ಗಂಡಾಗಿದ್ದು, ಆಕ್ರಮಣಕಾರಿಯಾಗಿ ವರ್ತಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಸ್ನೇಕ್ ಚಾಂಪ್ ಅವರ ಕಾಲಿಗೆ ಸುತ್ತಿಕೊಂಡು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಬೆಚ್ಚಿ ಬೀಳಿಸಿದ್ದು, ಅರ್ಧ ತಾಸು ಪ್ರಯಾಸದಿಂದ ಹಾವನ್ನು ಸೆರೆ ಹಿಡಿದು ಕೆ.ಗುಡಿ ಅರಣ್ಯಕ್ಕೆ ಬಿಡಲಾಗಿದೆ.