ಚಾಮರಾಜನಗರ: ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಜಿಲ್ಲಾಸ್ಪತ್ರೆಗೆ ಮಾಸ್ಕ್ ಧರಿಸದೇ ಬರುವವರ ಮೇಲೆ ದಂಡ ಪ್ರಯೋಗ ನಡೆಯುತ್ತಿದೆ.
ಈ ಕುರಿತು ಜಿಲ್ಲಾ ಸರ್ಜನ್ ಡಾ.ಮುರುಳಿಕೃಷ್ಣ ಈಟಿವಿ ಭಾರತದೊಂದಿಗೆ ಮಾತನಾಡಿ, ಸರ್ಕಾರವು ಕೂಡ ಮಾಸ್ಕ್ ಕಡ್ಡಾಯಗೊಳಿಸಿದೆ. ಆದರೂ ಆಸ್ಪತ್ರೆಗೆ ಬರುವ ರೋಗಿಗಳು, ರೋಗಿಗಳ ಸಂಬಂಧಿಕರು ಮಾಸ್ಕ್ ಧರಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕೆಲವರು ಮಾಸ್ಕ್ ಅನ್ನು ಗಲ್ಲಕ್ಕೇರಿಸಿ ಬೇಕಾಬಿಟ್ಟಿ ಧರಿಸುತ್ತಿರುವುದರಿಂದ ಪೊಲೀಸ್ ಇಲಾಖೆ ನೆರವು ಪಡೆದು, ದಂಡ ಪ್ರಯೋಗಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದ್ರು.
ಕೊರೊನಾ ತೀವ್ರತೆ ಹೆಚ್ಚಾಗುತ್ತಿದೆ. ಮುನ್ನೆಚ್ಚರಿಕೆಗಿಂತ ಕೋವಿಡ್ಗೆ ಮದ್ದಿಲ್ಲ. 500 ರೂ. ದಂಡ ಕಟ್ಟುವುದಕ್ಕಿಂತ ಮಾಸ್ಕ್ ಧರಿಸಿಯೇ ಆಸ್ಪತ್ರೆಗೆ ಬರಬೇಕು. ಈಗ ಸೋಂಕು ಕಾಣಿಸಿಕೊಂಡು ನೇರ ಐಸಿಯುಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ ಎಂದು ಅವರು ಎಚ್ಚರಿಸಿದರು.
ಒಪಿಡಿಗೆ ಬರುವವರಿಗೂ ಟೆಸ್ಟ್:
ಜಿಲ್ಲಾಸ್ಪತ್ರೆಯ ಹೊರರೋಗಿ ವಿಭಾಗಕ್ಕೆ ಬರುವವರಿಗೆ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡಲಾಗುತ್ತಿದ್ದು ಜ್ವರ, ನೆಗಡಿ ಹಾಗೂ ಇತರೆ ರೋಗಗಳಿಗೆ ತಪಾಸಣೆಗೆ ಬಂದವರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ನಗರಸಭೆ ಇಂದಲೂ ದಂಡ ಪ್ರಯೋಗ:
ಚಾಮರಾಜನಗರ ನಗರಸಭೆ ವತಿಯಿಂದಲೂ ಮಾಸ್ಕ್ ಧರಿಸದವರಿಗೆ ದಂಡ ಹಾಕಲಾಗುತ್ತಿದೆ. ಪ್ರತಿದಿನ ಬೆಳಗ್ಗೆ- ಸಂಜೆ ಪ್ರಮುಖ ರಸ್ತೆಗಳಲ್ಲಿ ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಅಧಿಕಾರಿಗಳು, ಮುಖಗವಸು ಇಲ್ಲದೇ ಬಂದವರಿಗೆ ಫೈನ್ ಹಾಕಿ ಬಿಸಿ ಮುಟ್ಟಿಸುತ್ತಿದ್ದಾರೆ.